ಸುತ್ತೂರು ಜಾತ್ರಾ ಮಹೋತ್ಸವ: ನವದಾಂಪತ್ಯಕ್ಕೆ ಕಾಲಿಟ್ಟ 120 ಜೋಡಿ
Published : Feb 7, 2024, 4:33 PM IST
ಮೈಸೂರು: ನಂಜನಗೂಡು ತಾಲೂಕಿನ ಶ್ರೀಕ್ಷೇತ್ರ ಸುತ್ತೂರಿನಲ್ಲಿ ನಡೆದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ 120 ಜೋಡಿ ನವದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಹೋತ್ಸವದ 2ನೇ ದಿನವಾದ ಇಂದು ಮಧ್ಯಾಹ್ನ 12 ಗಂಟೆಗೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ನೂತನ ವರರಿಗೆ ಸ್ವಾಮೀಜಿ ಮಾಂಗಲ್ಯ ಸರ ವಿತರಿಸಿದರು. ಗಟ್ಟಿ ಮೇಳದಲ್ಲಿ ವಧುವಿಗೆ ತಾಳಿ ಕಟ್ಟುತ್ತಿದ್ದಂತೆ ಹರ್ಷದ ವಾತಾವರಣ ಕಂಡುಬಂತು. ಹೊಸ ಬದುಕಿಗೆ ಕಾಲಿಟ್ಟ ವಧು-ವರರಿಗೆ ಶ್ರೀಗಳು ಶುಭ ಹಾರೈಸಿದರು.
ವೀರಶೈವ ಲಿಂಗಾಯತ 4, ಪರಿಶಿಷ್ಟ ಜಾತಿ 61, ಪರಿಶಿಷ್ಟ ಪಂಗಡ 26, ಹಿಂದುಳಿದ ವರ್ಗ 18, ಅಂತರ್ಜಾತಿಯ 11 ಜೋಡಿ ವಿವಾಹವಾದರು. ಈ ಪೈಕಿ ತಮಿಳುನಾಡಿನ 23, ವಿಶೇಷಚೇತನರು 4 ಹಾಗು ಒಂದು ಜೋಡಿ ಮರು ಮದುವೆಯಾದರು.
ಶಾಸಕ ರಾಮಮೂರ್ತಿ, ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಸ್ವಾಮಿ ಗುರುರತ್ನಂ ಜ್ಞಾನ ತಪಸ್ವಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.