ಮೈಸೂರು: ಹದಿನಾರು ಗ್ರಾಮದಲ್ಲಿ ಸಂಭ್ರಮದಿಂದ ನೆರವೇರಿದ ಎತ್ತಿನ ಬಂಡಿ ಜಾತ್ರೆ - Bullock cart festival - BULLOCK CART FESTIVAL
Published : Apr 3, 2024, 6:12 PM IST
ಮೈಸೂರು: ನಂಜನಗೂಡು ತಾಲೂಕು ಛತ್ರ ಹೋಬಳಿ ವ್ಯಾಪ್ತಿಯ ಹದಿನಾರು ಗ್ರಾಮದಲ್ಲಿ ಇತಿಹಾಸ ಪ್ರಸಿದ್ದಿಯುಳ್ಳ ಬಂಡಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಮೊದಲು ಹದಿನಾರು ಗ್ರಾಮದ ಗ್ರಾಮದೇವತೆ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಮೂರು ಎತ್ತಿನ ಬಂಡಿ ಗಾಡಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮದ ಮುಖ್ಯ ರಸ್ತೆಯಲ್ಲಿ ಶೃಂಗರಿಸಿದ್ದ ಎತ್ತಿನ ಬಂಡಿ ಓಡಿಸುವ ಮೂಲಕ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಈ ಬಂಡಿ ಜಾತ್ರಾ ಮಹೋತ್ಸವ ಕಣ್ತುಂಬಿಸಿಕೊಳ್ಳಲು ಅಕ್ಕ ಪಕ್ಕದ ಗ್ರಾಮಗಳಾದ ಬೊಕ್ಕಳ್ಳಿ, ಹುಳಿಮಾವು, ಹದಿನಾರು ಮೊಳೆ, ಮೂಡಳ್ಳಿ, ಮಲ್ಲ ರಾಜಯ್ಯನ ಹುಂಡಿ, ಮಾದಯ್ಯನ ಹುಂಡಿ, ಹದಿನಾರು ಗ್ರಾಮ ಸೇರಿದಂತೆ ವಿವಿಧ ಕಡೆಯಿಂದ ಸುಮಾರು 25 ಸಾವಿರಕ್ಕಿಂತ ಹೆಚ್ಚು ಭಕ್ತರು ಎತ್ತಿನ ಬಂಡಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮುಂಚೆ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆ ಚೌಡೇಶ್ವರಿ ಅಮ್ಮನವರಿಗೆ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು. ಮಧ್ಯಾಹ್ನ ಗ್ರಾಮ ದೇವತೆ ಚೌಡೇಶ್ವರಿಗೆ ಹರಕೆ ಹೊತ್ತಿದ್ದ ಭಕ್ತರು ವಿವಿಧ ಪೂಜೆ ನೆರವೇರಿಸುವ ಜೊತೆಗೆ ಹರಕೆ ತೀರಿಸಿದರು. ನಂತರ ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಹೂವು, ಬಾಳೆ, ಎಳನೀರು ಸೇರಿದಂತೆ ವಿವಿಧ ಧಾನ್ಯದಲ್ಲಿ ಎತ್ತಿನ ಬಂಡಿಯನ್ನು ಶೃಂಗರಿಸಿ ಸಿದ್ಧಗೊಳಿಸಿದ್ದರು. ಸಂಜೆ ಎತ್ತಿನ ಬಂಡಿಯನ್ನು ಓಡಿಸುವ ಮೂಲಕ ಜಾತ್ರೆ ಆಚರಿಸಲಾಯಿತು.
ಇದನ್ನೂ ಓದಿ:ರಂಜಾನ್ ಮಾಸ: ಕುಂದಾನಗರಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಸಂಭ್ರಮ - RAMADAN SHOPPING