ಮುಡಾ ಹಗರಣ 50:50 ನಿವೇಶನ ರದ್ದುಗೊಳಿಸುವ ನಿರೀಕ್ಷೆಯಿದೆ - ಶಾಸಕ ಶ್ರೀವತ್ಸ
Published : Nov 1, 2024, 4:26 PM IST
ಮೈಸೂರು: ಮುಡಾದಲ್ಲಿ 50:50 ಅನುಪಾತದಲ್ಲಿ 2020ರಿಂದ ಹಂಚಿಕೆ ಮಾಡಿರುವ ಎಲ್ಲ ನಿವೇಶನಗಳನ್ನು ಮುಡಾ ವಾಪಸ್ ಪಡೆಯುವ ಬಗ್ಗೆ 4 ಅಂಶದ ಪತ್ರವನ್ನು ಸಿಎಂಗೆ ನೀಡಿದ್ದೆ. ಈ ಬಗ್ಗೆ ಸಿಎಂ ಸಕರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವೇ 50:50 ಅನುಪಾತದ ನಿವೇಶನಗಳನ್ನ ವಾಪಸ್ ಪಡೆಯುವ ನಿರೀಕ್ಷೆಯಿದೆ ಎಂದು ಶಾಸಕ ಶ್ರೀವತ್ಸ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನವಿ ಪತ್ರಕ್ಕೆ ಸ್ಪಂದಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಗರಾಭಿವೃದ್ದಿ ಇಲಾಖೆಗೆ ಸಿಎಂ ಟಿಪ್ಪಣಿ ಕಳಿಸಿದ್ದಾರೆ. ಅದರಂತೆ 50:50 ಅನುಪಾತದ ಮುಡಾದ ಅಕ್ರಮ ನಿವೇಶನಗಳು ರದ್ದಾಗಲಿವೆ. ಈ ಬಗ್ಗೆ ದೇಸಾಯಿ ಆಯೋಗಕ್ಕೆ ನಗರಾಬಿವೃದ್ಧಿ ಇಲಾಖೆ ಪತ್ರ ಕಳುಹಿಸಿದೆ ಎಂದರು.
ಇಡಿ ತನಿಖೆಯಿಂದ ಸಮಾಧಾನ: 50:50 ಅನುಪಾತದಲ್ಲಿ ಕಳೆದ 4 ವರ್ಷಗಳಲ್ಲಿ ಕೋಟ್ಯಾಂತರ ರೂ. ಬೆಲೆ ಬಾಳುವ 1800ಕ್ಕೂ ಹೆಚ್ಚು ನಿವೇಶನಗಳನ್ನು ಮುಡಾ ನೀಡಿದೆ. ಈ ಎಲ್ಲಾ ಸೈಟ್ಗಳನ್ನು ರದ್ದು ಮಾಡುವ ಪ್ರಕ್ರಿಯೆ ಜತೆಗೆ ಈ ತನಿಖೆಯಲ್ಲಿ ಇ.ಡಿ ಬಂದಿರುವುದು ಸಮಾಧಾನ ತಂದಿದೆ. ಲೋಕಾಯುಕ್ತ ತನಿಖೆಯಲ್ಲಿ ನಮಗೆ ಸಮಾಧಾನ ಇಲ್ಲ ಎಂದು ತಿಳಿಸಿದರು.
ಬೈರತಿ ಸುರೇಶ್ ವಿರುದ್ಧ ಕ್ರಮ: ಸಿಎಂ ಮುಂದಿಟ್ಟುಕೊಂಡು ಸಚಿವ ಬೈರತಿ ಸುರೇಶ್ ರಕ್ಷಣೆ ಪಡೆಯುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಖಂಡಿತವಾಗಿಯೂ ಸಚಿವರನ್ನು ಇ.ಡಿ ತನಿಖೆಗೆ ಒಳಪಡಿಸಬೇಕು. ಪ್ರಕರಣದಲ್ಲಿ ಸಚಿವರು ಸರಿಯಾಗಿ ತಮ್ಮ ಕೆಲಸ ನಿರ್ವಹಿಸಿಲ್ಲ. ಇದರಿಂದ ಸಿಎಂಗೆ ಮುಜುಗರ ಆಗುವ ಪ್ರಸಂಗ ಎದುರಾಯಿತು. ಮೊದಲು ಸಚಿವರನ್ನು ವಿಚಾರಣೆಗೆ ಒಳಪಡಿಸಬೇಕು. ಜತೆಗೆ ಹಿಂದಿನ ಆಯುಕ್ತರಾದ ನಟೇಶ್ ಮತ್ತು ದಿನೇಶ್ ಕುಮಾರ್ ಅವರನ್ನು ತೀವ್ರವಾಗಿ ವಿಚಾರಣೆ ನಡೆಸಬೇಕೆಂದು ಶಾಸಕ ಶ್ರೀವತ್ಸ ಒತ್ತಾಯಿಸಿದರು.
ಇದನ್ನೂ ಓದಿ: ಸಚಿವ, ಶಾಸಕರುಗಳ ವಿರುದ್ಧದ ಪ್ರಕರಣ ಹಿಂಪಡೆದಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಅರ್ಜಿದಾರರು