ಬಿಜೆಪಿಗೆ ವೋಟ್ ಹಾಕಿದ್ರೆ ಸಿದ್ದರಾಮಯ್ಯಗೆ ಮೋಸ ಮಾಡಿದಂತೆ: ಶಾಸಕ ಪ್ರದೀಪ್ ಈಶ್ವರ್ - Pradeep Eshwar Campaign - PRADEEP ESHWAR CAMPAIGN
Published : May 1, 2024, 8:24 PM IST
ದಾವಣಗೆರೆ: ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀವು ಮತ ಹಾಕಬೇಕು. ಬಿಜೆಪಿಗೆ ಮತ ಹಾಕಿದರೆ ಸಿದ್ದರಾಮಯ್ಯನವರಿಗೆ ಮೋಸ ಮಾಡಿದಂತೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಇಂದು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಹರಳಹಳ್ಳಿ, ಗೋವಿನಕೋವಿ ಗ್ರಾಮಗಳಲ್ಲಿ ಅವರು ಮತಯಾಚಿಸಿದರು.
ಕುರುಬ ಸಮುದಾಯದಿಂದ ಬಂದ ಸಿದ್ದರಾಮಯ್ಯನವರು ಇಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದ ಜನತೆಗೆ ಗ್ಯಾರಂಟಿಗಳನ್ನು ಕೊಡುವ ಮೂಲಕ ಎಲ್ಲ ಸಮುದಾಯಗಳ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಕೊಟ್ಟ ಗ್ಯಾರಂಟಿಯ ಹಣದಿಂದ ತಾಯಂದಿರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಸರ್ಕಾರದಿಂದ ಪಡಿತರ ಅಕ್ಕಿ, ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ, ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಉಚಿತ ವಿದ್ಯುತ್ ಪೂರೈಕೆ ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ವರ್ಷಕ್ಕೆ 1.20 ಲಕ್ಷ ಪ್ರತೀ ಮಹಿಳೆಗೆ ಸಿಗಲಿದೆ. ಬಿಜೆಪಿಯವರು 10 ವರ್ಷಗಳಿಂದ ಜನರಿಗೆ ಕೊಟ್ಟಿದ್ದು ಚೊಂಬು ಎಂದು ವಾಗ್ದಾಳಿ ನಡೆಸಿದರು.
ನಾವು ನೀಡಿದಂತಹ ಗ್ಯಾರಂಟಿಗಳನ್ನು ಕೊಡಲು ಬಿಜೆಪಿಯರಿಗೆ ತಾಕತ್ತಿಲ್ಲ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ನಾವು ಕೊಡುವ ಎರಡು ಸಾವಿರ ರೂಪಾಯಿ ಜೀವನ ನಡೆಸಲು ಆಸರೆಯಾಗುತ್ತಿದೆ. ಹಾಗಾಗಿ, ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯನವರ ಕೈ ಬಲಪಡಿಸುವಂತೆ ಪ್ರದೀಪ್ ಈಶ್ವರ್ ಮನವಿ ಮಾಡಿದರು.
ಇದನ್ನೂ ಓದಿ: 'ಈ ಚುನಾವಣೆಯಲ್ಲಿ ಮಹಾಪ್ರಭುವನ್ನು ಕೆಳಗಿಳಿಸಬೇಕು': ನಟ ಪ್ರಕಾಶ್ ರಾಜ್ - Prakash Raj