ಬಸ್ನಿಂದ ಬಿದ್ದು ಗಾಯಗೊಂಡ ಮಹಿಳೆ: ಗಾಯಾಳುವನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ ಶಾಸಕ - ಗಾಯಳು ಮಹಿಳೆ
Published : Feb 19, 2024, 10:47 AM IST
ದಾವಣಗೆರೆ: ಸರ್ಕಾರಿ ಬಸ್ನಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯ ಸಹಾಯಕ್ಕೆ ಧಾವಿಸಿದ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವಂತಪ್ಪ ಮಾನವೀಯತೆ ಮೆರೆದಿದ್ದಾರೆ. ಗಾಯಾಳು ಮಹಿಳೆಯನ್ನು ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
ಭಾನುವಾರ ಮಾಯಕೊಂಡ ಶಾಸಕ ಬಸವಂತಪ್ಪ ತಮ್ಮ ಕ್ಷೇತ್ರದ ಗ್ರಾಮಗಳ ಪ್ರವಾಸದಲ್ಲಿರುವ ವೇಳೆ, ದಾರಿ ಮಧ್ಯೆ ಬಸ್ನಿಂದ ಆಕಸ್ಮಿಕವಾಗಿ ಬಿದ್ದು, ಕುಕ್ಕುವಾಡ ಗ್ರಾಮದ ಹಾಲಮ್ಮನವರು ಗಂಭೀರವಾಗಿ ಗಾಯಗೊಂಡಿದ್ದರು. ಬಿದ್ದ ರಭಸಕ್ಕೆ ಮಹಿಳೆಯ ತಲೆಗೆ ಪೆಟ್ಟಾಗಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ ಶಾಸಕ ಬಸವಂತಪ್ಪ, ಮಹಿಳೆಯನ್ನು ಆಸ್ಙತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ.
ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ವಾಹನಗಳು ಇಲ್ಲದೇ ಇದ್ದುದ್ದರಿಂದ ಆಂಬ್ಯುಲೆನ್ಸ್ಗೆ ಕಾಯದೇ, ಒದ್ದಾಡುತ್ತಿದ್ದ ಗಾಯಾಳುವನ್ನು ತಮ್ಮದೇ ಕಾರಿನಲ್ಲಿ ಕರೆದುಕೊಂಡು ದಾವಣಗೆರೆಯ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾತ್ರವಲ್ಲದೇ ವೈದ್ಯರನ್ನು ಸಂಪರ್ಕಿಸಿ, ಸ್ಥಳದಲ್ಲಿ ನಿಂತು ಚಿಕಿತ್ಸೆ ಕೊಡಿಸಿ ಮಹಿಳೆಯ ಪ್ರಾಣ ಉಳಿಸಿದ್ದಾರೆ. ಮಹಿಳೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಸಿಗುವಂತೆ ಮಾಡಿದ ಶಾಸಕರ ಸಮಾಜಮುಖಿ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ನೋಡಿ: ಗಾಯಾಳುಗಳನ್ನು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದ ಸಚಿವ ಲಾಡ್: ವಿಡಿಯೋ