ಉಡ ಬೇಟೆಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ: ಕಾರ್ಯಾಚರಣೆಯ ವಿಡಿಯೋ - KING COBRA RESCUED
Published : Dec 1, 2024, 7:42 PM IST
ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಾಲ್ಗಲ್ ಮುಳ್ಳೋಡಿ ಗ್ರಾಮದಲ್ಲಿ ಉಡ ಬೇಟೆಯಾಡಲು ಯತ್ನಿಸುತ್ತಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.
ಮುಳ್ಳೋಡಿ ಗ್ರಾಮದ ರಾಜಪ್ಪ ಗೌಡ ಎಂಬವರು ತಮ್ಮ ತೋಟಕ್ಕೆ ತೆರಳುವಾಗ ದೈತ್ಯ ಕಾಳಿಂಗವೊಂದು ಉಡವನ್ನು ಬೇಟೆಯಾಡಲು ಪ್ರಯತ್ನಿಸುತ್ತಿತ್ತು. ತಕ್ಷಣ ಅವರು ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗ ತಜ್ಞ ರಿಜ್ವಾನ್ ಅವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಉರಗ ತಜ್ಞ ರಿಜ್ವಾನ್ ಹಾಗೂ ಅರಣ್ಯ ಸಿಬ್ಬಂದಿ ಅಂದಾಜು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದರು. ಬೇಟೆಯಾಡಲು ಯತ್ನಿಸಿದ್ದ ಉಡವನ್ನೂ ಅರಣ್ಯಕ್ಕೆ ಕೊಂಡೊಯ್ದು ಬಿಟ್ಟರು. ಕಾಳಿಂಗ ಸರ್ಪವನ್ನು ಸೆರೆಹಿಡಿದ ಬಳಿಕ ತೋಟದ ಮಾಲೀಕ ಹಾಗೂ ಕಾರ್ಮಿಕರು ನಿರಾಳರಾದರು.
ಕಳೆದ ಕೆಲ ದಿನಗಳಿಂದ ಕಾಡಾನೆ ಹಾವಳಿಯ ಜೊತೆಗೆ ಕಾಳಿಂಗ ಸರ್ಪಗಳ ಹಾವಳಿಯೂ ಮಲೆನಾಡು ಭಾಗದಲ್ಲಿ ಹೆಚ್ಚಾಗಿದೆ. ಕಳಸ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಳಿಂಗ ಸರ್ಪಗಳು ಹಾಗೂ ಹೆಬ್ಬಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.
ಇದನ್ನೂ ಓದಿ : ಆರು ಅಡಿ ಉದ್ದದ ಎರಡು ನಾಗರಹಾವು ರಕ್ಷಿಸಿದ ಸ್ನೇಕ್ ಬಸವರಾಜ್ : ವಿಡಿಯೋ