ವಿಜಯಪುರದಲ್ಲಿ ಗಾಳಿ ಸಹಿತ ಸಿಡಿಲಿನೊಂದಿಗೆ ಮಳೆ; ಧರೆಗುರುಳಿದ ಬಾಳೆ, ದ್ರಾಕ್ಷಿ ಬೆಳೆ - CROP LOSS - CROP LOSS
Published : Mar 31, 2024, 3:50 PM IST
|Updated : Apr 2, 2024, 3:50 PM IST
ವಿಜಯಪುರ : ಜಿಲ್ಲೆಯ ಅಲ್ಲಲ್ಲಿ ಶನಿವಾರ ಸಂಜೆ ಮತ್ತು ರಾತ್ರಿ ಬೀಸಿದ ಬಿರುಗಾಳಿ ಸಹಿತ ಮಳೆಗೆ ಕೆಲವೆಡೆ ಬೆಳೆಹಾನಿ ಉಂಟಾಗಿರುವುದು ಕಂಡುಬಂದಿದೆ. ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ಮುರುಗೆಪ್ಪ ಚೌಗುಲಾ ಎಂಬುವರ ಬಾಳೆ ತೋಟ ಸಂಪೂರ್ಣ ನಾಶವಾಗಿದೆ.
ಸುಮಾರು ಒಂದು ಕಾಲು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಒಂದು ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ಧರೆಗುರುಳಿದ್ದು, ಸುಮಾರು ರೂ. 2 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇಳುವರಿ ಕಟಾವು ಹಂತಕ್ಕೆ ಬಂದಿದ್ದ ಬಾಳೆ ಗಿಡಗಳು ನಾಶವಾಗಿದ್ದು, ತೋಟದಲ್ಲಿನ ವಿದ್ಯುತ್‌ಕಂಬಗಳು ಮುರಿದು ಬಿದ್ದಿವೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತ ಮುರುಗೆಪ್ಪ ಚೌಗುಲಾ ಮತ್ತು ಕುಟುಂಬಸ್ಥರು ಕಂಗಾಲಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಆಗ್ರಹ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಕೆಲವೆಡೆ ನಿನ್ನೆ ರಾತ್ರಿ ಗಾಳಿ ಸಹಿತ ಸಿಡಿಲಿನೊಂದಿಗೆ ಅಲ್ಲಲ್ಲಿ ಜೋರಾಗಿ ಮಳೆಯಾಗಿದೆ. ಇದರಿಂದಾಗಿ ಕೆಲವೆಡೆ ಮರ ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ವಿಶ್ವನಾಥ ಪಾಟೀಲ್ ಅವರ ದ್ರಾಕ್ಷಿ ತೋಟಕ್ಕೆ ಹಾನಿಯಾಗಿದ್ದು ವರದಿಯಾಗಿದೆ.
ವಿದ್ಯುತ್ ಕಂಬಗಳು, ಮರ ಬಿದ್ದ ಪರಿಣಾಮ ದ್ರಾಕ್ಷಿ ಸಾಲುಗಳು ಹಾಳಾಗಿವೆ. ಗಾಳಿ ಸಹಿತ ಮಳೆಯಿಂದಲೇ ದ್ರಾಕ್ಷಿ ಬೆಳೆ ನೆಲಕಚ್ಚಿದಂತಾಗಿದೆ. ಹೀಗಾಗಿ, ತೋಟಗಾರಿಕಾ ಇಲಾಖೆಯಿಂದ ಸೂಕ್ತ ಪರಿಹಾರವನ್ನ ದ್ರಾಕ್ಷಿ ಬೆಳೆಗಾರ ವಿಶ್ವನಾಥ ಪಾಟೀಲ್ಗೆ ನೀಡಬೇಕೆಂದು ದ್ರಾಕ್ಷಿ ಬೆಳೆಗಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ: ಕಾಫಿ ಬೆಳೆಗಾರರ ಮುಖದಲ್ಲಿ ಮಂದಹಾಸ - Heavy Rain In Chikkamagalur