ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಹಾದಾಸೋಹಕ್ಕೆ ಸಕಲ ಸಿದ್ಧತೆ: ವಿಡಿಯೋ - ಮಹಾದಾಸೋಹ
Published : Jan 27, 2024, 4:38 PM IST
ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆ ಗವಿಮಠದಲ್ಲಿ ಇಂದಿನಿಂದ 15 ದಿನಗಳ ವರೆಗೆ ಮಹಾದಾಸೋಹದ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಹೀಗಾಗಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬಂದಿರುವ ಬಾಣಸಿಗರು ರೊಟ್ಟಿ, ಹೊಳಿಗೆ, ಮಾದಲಿ, ಅನ್ನ -ಸಾರು ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸುತ್ತಿದ್ದಾರೆ. ಇನ್ನು ಸಿಂಧನೂರಿನ ಗೆಳಯರ ಬಳಗದವರು 8 ಲಕ್ಷ ಶೇಂಗಾ ಹೊಳಿಗೆಯನ್ನು ಇಂದಿನ ದಾಸೋಹಕ್ಕೆ ಸಮರ್ಪಿಸಿದ್ದಾರೆ. ಸಾವಿರಾರು ಜನ ಸ್ವಯಂ ಸೇವಕರು ಅಡುಗೆ ತಯಾರಿಸುವುದು, ಬಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಗವಿಮಠದ ಭಕ್ತ ಪರಮೇಶ್ವರಪ್ಪ ಕೊಪ್ಪಳ ಮಾತನಾಡಿ, "ಮಹಾದಾಸೋಹದಲ್ಲಿ ಇಂದು 120 ಕ್ವಿಂಟಾಲ್ ಅನ್ನ, 12 ಕೊಪ್ಪರಿಕೆ ಸಾರು, 8 ಕೊಪ್ಪರಿಕೆ ಕಾಳು, ಬದನೆಕಾಯಿ ಪಲ್ಯ, ಮಾದಲಿ, ತುಪ್ಪ, ಶೇಂಗಾ ಹೊಳಿಗೆ ತಯಾರಿಸಲಾಗಿದೆ. ಸುಮಾರು ನಾಲ್ಕು ಲಕ್ಷ ಭಕ್ತರು ಇಂದು ಪ್ರಸಾದ ಸ್ವೀಕರಿಸಲಿದ್ದಾರೆ. ಮಹಾದಾಸೋಹವು ಹುಣ್ಣಿಮೆಯಿಂದ ಪ್ರಾರಂಭವಾಗಿ 15 ದಿನಗಳ ವರೆಗೆ ಅಂದರೆ ಅಮಾವಾಸ್ಯೆ ( ಫೆ.10) ನೇ ತಾರೀಖಿನ ವರೆಗೂ ನಡೆಯುತ್ತದೆ. ಮಹಾದಾಸೋಹದಲ್ಲಿ ವಿಶೇಷವಾಗಿ ಮಾದಲಿ, ತುಪ್ಪ ಮತ್ತು ನಾಳೆ ಮಿರ್ಚಿ ಭಜಿ ಮಾಡಲಾಗುತ್ತದೆ. ಮಹಾದಾಸೋಹಕ್ಕೆ ಭಕ್ತಾದಿಗಳೇ ಕೊಡುಗೆ ನೀಡಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಕೊಪ್ಪಳದ ಗವಿಮಠದಲ್ಲಿ ಸಂಭ್ರಮದಿಂದ ಜರುಗಿದ ತೆಪ್ಪೋತ್ಸವ, ಗಂಗಾರತಿ: ವಿಡಿಯೋ