ಮುಳ್ಳಯ್ಯನಗಿರಿ ಸುತ್ತಮುತ್ತ ಕಾಡ್ಗಿಚ್ಚು; ಅಪರೂಪದ ಸಸ್ಯ ಸಂಪತ್ತು ನಾಶ
Published : Feb 12, 2024, 8:12 PM IST
ಚಿಕ್ಕಮಗಳೂರು: ರಾಜ್ಯದ ಅತ್ಯಂತ ಎತ್ತರದ ಪರ್ವತ ಪ್ರದೇಶ ಹಾಗೂ ದೇಶ-ವಿದೇಶಿಗರ ನೆಚ್ಚಿನ ಪ್ರವಾಸಿ ತಾಣವೂ ಆಗಿರುವ ಜಿಲ್ಲೆಯ ಚಂದ್ರದ್ರೋಣ ಪರ್ವತಗಳ ಸಾಲಿನ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಕಾಡ್ಗಿಚ್ಚು ಹಬ್ಬಿದೆ. ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿದೆ. ಮುಳ್ಳಯ್ಯನಗಿರಿ ತಪ್ಪಲು ಎಂದರೇನೇ ಅಪರೂಪದ ಸಸ್ಯ ಸಂಪತ್ತಿನ ರಾಶಿ. ಸದ್ಯ ಬಿಸಿಲಿನ ಝಳಕ್ಕೆ ಬೆಂಕಿಯ ಕೆನ್ನಾಲಿಗೆ ಹೆಚ್ಚಿದ ಪರಿಣಾಮ ಅಪರೂಪದ ಸಸ್ಯರಾಶಿ ನಾಶವಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅರಣ್ಯ ಇಲಾಖೆ, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಯ ಜೊತೆ ಸ್ಥಳೀಯರೂ ಕೂಡ ಕೈಜೋಡಿಸಿದ್ದಾರೆ. ಆದರೆ, ಭಾರೀ ಗಾಳಿಗೆ ಜ್ವಾಲೆ ಹರಡುತ್ತಲೇ ಇದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹೋರಾಡುತ್ತಿದ್ದಾರೆ. ಮುಳ್ಳಯ್ಯನಗಿರಿ ಮಾರ್ಗದ ರಸ್ತೆ ಬದಿಯಲ್ಲೂ ಬೆಂಕಿ ಹರಡಿದೆ. ಕೆಲ ಪ್ರವಾಸಿಗರು ಮುಳ್ಳಯ್ಯನಗಿರಿಯಿಂದ ಚಿಕ್ಕಮಗಳೂರಿಗೆ ಬರಲು ಸಾಧ್ಯವಾಗದೇ ಮುಳ್ಳಯ್ಯನಗಿರಿ ಮಾರ್ಗದಲ್ಲೇ ಸ್ಥಗಿತಗೊಂಡಿದ್ದಾರೆ. ಅರಣ್ಯಾಧಿಕಾರಿಗಳು ಜ್ವಾಲೆ ಸ್ವಲ್ಪ ತಗ್ಗಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: ಕಾಡ್ಗಿಚ್ಚು ಪತ್ತೆಗೆ ದೂರಸಂವೇದಿ ತಂತ್ರಜ್ಞಾನ ಬಳಸಿ: ಸಚಿವ ಈಶ್ವರ ಖಂಡ್ರೆ