ಬೆಂಗಳೂರಿನಲ್ಲಿ ಅಗ್ನಿ ಅವಘಡ; ವೆಲ್ಡಿಂಗ್ ಗ್ಯಾಸ್ ಟ್ಯಾಂಕರ್ ಸ್ಫೋಟ ಶಂಕೆ
Published : Mar 9, 2024, 9:43 PM IST
|Updated : Mar 9, 2024, 10:08 PM IST
ಬೆಂಗಳೂರು : ಮೋಟಾರು ಗ್ಯಾರೇಜ್‌ನಲ್ಲಿ ಸಂಭವಿಸಿದ ಆಕಸ್ಮಿಕ ಸ್ಫೋಟ ಹಾಗೂ ಅಗ್ನಿ ಅವಘಡದಿಂದ ನಾಲ್ವರು ಗಾಯಗೊಂಡಿರುವ ಘಟನೆ ಮಾಗಡಿ ರೋಡ್ ಠಾಣಾ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಡೆದಿದೆ. ವೆಲ್ಡಿಂಗ್ ಕೆಲಸಕ್ಕೆ ಬಳಸುವ ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಗ್ಯಾರೇಜ್‌ನಲ್ಲಿದ್ದ ಎರಡು ಕಾರುಗಳಿಗೆ ಬೆಂಕಿ ತಗುಲಿದೆ.
ಸಂಭವಿಸಿದ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಗ್ಯಾರೇಜ್ ಮಾಲೀಕ, ಕೆಲಸಗಾರ, ಇಬ್ಬರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಜೆ ಆರು ಗಂಟೆ ಸುಮಾರಿಗೆ ಅವಘಡ ಸಂಭವಿಸಿದ್ದು, ಮೇಲ್ನೋಟಕ್ಕೆ ವೆಲ್ಡಿಂಗ್ ಗ್ಯಾಸ್ ಟ್ಯಾಂಕ್ ಸ್ಫೋಟದಿಂದ ಘಟನೆ ಸಂಭವಿಸಿರುವ ಸಾಧ್ಯತೆಯಿದೆ. ಸ್ಫೋಟದ ತೀವ್ರತೆಗೆ ಗ್ಯಾರೇಜ್ ಸುತ್ತಮುತ್ತ ಇರುವ ಕೆಲ ಮನೆಗಳ ಕಿಟಕಿ ಗಾಜುಗಳು ಸಹ ಜಖಂಗೊಂಡಿವೆ. ಗ್ಯಾರೇಜ್ ಮಾಲೀಕ ಜಾರ್ಜ್, ಕೆಲಸಗಾರ ಶಿವು, ಹಾಗೂ ಇಬ್ಬರು ಸಾರ್ವಜನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನ ಚಿಕಿತ್ಸೆಗಾಗಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಓದಿ: ಕೆಫೆ ಸ್ಫೋಟ ಪ್ರಕರಣ: 9 ದಿನವಾದರೂ ಪತ್ತೆಯಾಗದ ಆರೋಪಿ, ಶಂಕಿತನ ಮತ್ತಷ್ಟು ಫೋಟೋ ಬಿಡುಗಡೆ