ಗಂಗೊಂಡನಹಳ್ಳಿ ಶೆಡ್ನಲ್ಲಿ ಅಗ್ನಿ ಅವಘಡ: 30ಕ್ಕೂ ಅಧಿಕ ಆಟೋಗಳು ಬೆಂಕಿಗಾಹುತಿ - Fire Accident
Published : Feb 23, 2024, 10:01 AM IST
ಬೆಂಗಳೂರು: ಆಟೋ ಶೆಡ್ವೊಂದರಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದ್ದು, ಶೆಡ್ನಲ್ಲಿ ನಿಲ್ಲಿಸಿದ್ದ 30ಕ್ಕೂ ಹೆಚ್ಚು ಆಟೋಗಳು ಬೆಂಕಿಗಾಹುತಿಯಾಗಿರುವ ಘಟನೆ ಗುರುವಾರ ತಡರಾತ್ರಿ ನಾಯಂಡಹಳ್ಳಿ ಸಮೀಪದ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ರಿಜ್ವಾನ್ ಎಂಬಾತನಿಗೆ ಸೇರಿರುವ ಶೆಡ್ ಎಂಬುದು ತಿಳಿದು ಬಂದಿದೆ. ಸಾಕಷ್ಟು ಜನ ಆಟೋ ರಿಕ್ಷಾ ಮಾಲೀಕರು ಮನೆ ಮುಂದೆ ಪಾರ್ಕಿಂಗ್ ಜಾಗ ಇಲ್ಲವೆಂದು ಹಣ ಪಾವತಿಸಿ ಈತನ ಶೆಡ್ನಲ್ಲಿ ತಮ್ಮ ಆಟೋಗಳನ್ನು ನಿಲ್ಲಿಸುತ್ತಿದ್ದರು. ತಡರಾತ್ರಿ 2 ಗಂಟೆ ಸುಮಾರಿಗೆ ಅನಾಹುತ ಸಂಭವಿಸಿದೆ.
ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಇನ್ನೂ ಮಾಹಿತಿ ಸಿಕ್ಕಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅನಾಹುತ ಸಂಭವಿಸಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವಘಡದಿಂದಾಗಿ ಸುಮಾರು 30ಕ್ಕೂ ಅಧಿಕ ಆಟೋಗಳು ಸಂಪೂರ್ಣವಾಗಿ ಅಗ್ನಿಗಾಹುತಿಯಾಗಿವೆ ಎಂದು ಹೇಳಲಾಗುತ್ತಿದೆ. ಸ್ಥಳೀಯರ ಸಹಕಾರದಿಂದ ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ಕೈಗೊಂಡ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ನೋಡಿ: ರಾಮನಗರ: ಸುಗಂಧ ದ್ರವ್ಯ ಗೋದಾಮಿಗೆ ಬೆಂಕಿ ತಗುಲಿ ಮೂವರು ಸಜೀವ ದಹನ, ಐವರಿಗೆ ಗಾಯ