ಶಿವಮೊಗ್ಗ: ಪೊಲೀಸರಿಂದ ₹13 ಲಕ್ಷ ಮೌಲ್ಯದ ಮಾದಕ ವಸ್ತು ನಾಶ
Published : Feb 9, 2024, 11:02 PM IST
ಶಿವಮೊಗ್ಗ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 42 ಎನ್ಡಿಪಿಎಸ್ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ಪದಾರ್ಥಗಳನ್ನು ಪೊಲೀಸರು ನಾಶಪಡಿಸಿದ್ದಾರೆ. ಒಟ್ಟು 13,16,400 ರೂ ಮೌಲ್ಯದ 34 ಕೆ.ಜಿ 825 ಗ್ರಾಂ ತೂಕದ ಮಾದಕ ವಸ್ತು, ಗಾಂಜಾ ನಾಶ ಮಾಡಲಾಗಿದೆ.
ಭದ್ರಾವತಿ ತಾಲೂಕು ಮಾಚೇನಹಳ್ಳಿಯ ಸುಶ್ರುತ ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ಸೊಸೈಟಿಯಲ್ಲಿ ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸಮ್ಮುಖದಲ್ಲಿ ನಾಶಪಡಿಸಲಾಗಿದೆ. ಈ ವೇಳೆ ಎಎಸ್ಪಿ ಹಾಗೂ ಡಿವೈಎಸ್ಪಿಗಳು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ಷೇತ್ರ ಸಹಾಯಕರಾದ ವಿನಾಯಕ್ ಬಿ.ಆರ್ ಉಪಸ್ಥಿತರಿದ್ದರು. ಈ ವೇಳೆ ಮಾದಕ ವಸ್ತು, ಗಾಂಜಾ ಮಾರಾಟ, ಸಾಗಾಟ, ಸಂಗ್ರಹಣೆ ಮತ್ತು ಬೆಳೆಯುವವರ ವಿರುದ್ಧ ಪೊಲೀಸ್ ಇಲಾಖೆಯಿಂದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಮತ್ತೊಂದೆಡೆ, ರಾಜ್ಯಾದ್ಯಂತ ಕಳೆದ ಒಂದು ವರ್ಷದಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಜಪ್ತಿ ಮಾಡಿರುವ ಒಟ್ಟು 59.16 ಕೋಟಿ ಮೌಲ್ಯದ ಮಾದಕ ಪದಾರ್ಥಗಳನ್ನು, ಬೆಂಗಳೂರಿನ ಹೊರವಲಯದ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ತ್ಯಾಜ್ಯ ನಿರ್ವಹಣೆ ಯೋಜನೆ ಘಟಕದಲ್ಲಿ ನಾಶಪಡಿಸಲಾಯಿತು.
ಇದನ್ನೂ ಓದಿ: ಬೆಂಗಳೂರು: 59.16 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ನಾಶ ಪಡಿಸಿದ ಪೊಲೀಸರು