ಕಣ್ಣೀರನ್ನು ನಾಟಕೀಯ ಎನ್ನುವಂತಹ ಪಾಪಿಗಳು ಈ ಭೂಮಿ ಮೇಲೆ ಬದುಕುತ್ತಿದ್ದಾರೆ: ದಿಂಗಾಲೇಶ್ವರ ಸ್ವಾಮೀಜಿ - Dingaleshwar Swamiji - DINGALESHWAR SWAMIJI
Published : Apr 20, 2024, 9:05 PM IST
ಹುಬ್ಬಳ್ಳಿ: ನಿರಂಜನ್ ಹಿರೇಮಠ ದಂಪತಿ ನನಗೆ ಬಹಳ ಬೇಕಾದವರು. ನನ್ನ ಜೀವನದಲ್ಲಿ ನನಗೆ ಕಣ್ಣೀರೇ ಬರುವುದಿಲ್ಲ, ಆದರೆ ನಿನ್ನೆ ಮೃತ ನೇಹಾಳನ್ನು ನೆನಪಿಸಿಕೊಂಡು ಬಹಳಷ್ಟು ಅತ್ತಿದ್ದೇನೆ. ಕಣ್ಣೀರನ್ನು ನಾಟಕೀಯ ಎನ್ನುವಂತಹ ಪಾಪಿಗಳು ಈ ಭೂಮಿ ಮೇಲೆ ಬದುಕುತ್ತಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಕಣ್ಣೀರು ಹಾಕಿದರು. ನಿರಂಜನ್ ಹಿರೇಮಠ ಮನೆಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸನಗೌಡ ಯತ್ನಾಳ್ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಹಗುರವಾಗಿ ತೆಗೆದುಕೊಂಡಿದೆ. ಕೇಂದ್ರದ ಬಿಜೆಪಿ ನಾಯಕರು ಈ ಪ್ರಕರಣವನ್ನು ಚುನಾವಣೆಯ ಅಸ್ತ್ರವಾಗಿ ಮಾಡಿಕೊಂಡಿದ್ದಾರೆ. ಇದು ರಾಜಕಾರಣಿಗಳ ಸ್ವಾರ್ಥಕ್ಕೆ ಹಿಡಿದ ಕನ್ನಡಿಯಾಗಿದೆ. ನೇಹಾಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರೆ ಆಕೆಯ ಹೆಸರಿನಲ್ಲಿ ಮಹಿಳೆ ಸ್ವಾತಂತ್ರ್ಯವಾಗಿ ಹಗಲು - ರಾತ್ರಿ ಓಡಾಡುವಂತಹ ಕಾನೂನು ತರಬೇಕು. ಮಹಿಳೆ, ವಿದ್ಯಾರ್ಥಿನಿಯವರನ್ನು ಹತ್ಯೆ ಮಾಡಿದವರನ್ನು ಯಾವುದೇ ಕಾರಣ ಕೊಡದೇ ಪ್ರಾಣ ತೆಗೆಯುವ ಕಾನೂನು ಬಂದರೆ ಇಲ್ಲಿ ಸ್ತ್ರೀಯರು ನೆಮ್ಮದಿಯಾಗಿ ಇರುವುದಕ್ಕೆ ಸಾಧ್ಯ ಎಂದು ಹೇಳಿದರು.