ಅಕ್ರಮ ಚಿನ್ನ ಸಾಗಣೆ; ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಬಿದ್ದ ಪ್ರಯಾಣಿಕ - ಬೆಂಗಳೂರು ಕಸ್ಟಮ್ಸ್ ಅಧಿಕಾರಿ
Published : Feb 15, 2024, 4:48 PM IST
ದೇವನಹಳ್ಳಿ : ಅಲಂಕಾರಿಕ ಅಗರಬತ್ತಿ ಕಂಟೈನರ್ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ 17 ಲಕ್ಷ ಮೌಲ್ಯದ 279.5 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.
ಇಂದು ಬೆಳಗ್ಗೆ ಕುವೈತ್ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಸಂಖ್ಯೆ ಜೆ9-431 ವಿಮಾನ ಬಂದಿದ್ದು, ಇದರಲ್ಲಿನ ಒಬ್ಬ ಪ್ರಯಾಣಿಕನ ಮೇಲಿನ ಸಂಶಯದಿಂದ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಈ ವೇಳೆ ಆತ ಅಲಂಕಾರಿಕ ಅಗರಬತ್ತಿ ಕಂಟೈನರ್ನಲ್ಲಿ ಮರೆಮಾಚಿ ಚಿನ್ನದ ತುಂಡುಗಳನ್ನ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ವಿಚಾರಣೆ ಮುಂದುವರೆದಿದ್ದು, ಆರೋಪಿಯಿಂದ 17,23,117 ರೂಪಾಯಿ ಮೌಲ್ಯದ 279.5 ಗ್ರಾಂ ಚಿನ್ನವನ್ನ ಜಪ್ತಿ ಮಾಡಿದ್ದಾರೆ.
₹ 2 ಕೋಟಿ ಮೌಲ್ಯದ ಚಿನ್ನ ವಶ : ವಿದೇಶಗಳಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕರನ್ನು ತಡೆದಿದ್ದ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು 2 ಕೋಟಿ ರೂ. ಮೌಲ್ಯದ 3,311 ಗ್ರಾಂ ಚಿನ್ನ ವಶಕ್ಕೆ (ಜನವರಿ 1-24) ಪಡೆದಿದ್ದರು. ಇತ್ತೀಚೆಗೆ ಡಿಸೆಂಬರ್ 23, 25, 29ರಂದು ಕೌಲಾಲಂಪುರ, ಜೆಡ್ಡಾ, ಶಾರ್ಜಾ ಮತ್ತು ಬ್ಯಾಂಕಾಕ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ವಿಮಾನಗಳಲ್ಲಿ ಬಂದಿಳಿದಿದ್ದ ಐವರು ಪುರುಷರು ಮತ್ತು 11 ಮಂದಿ ಮಹಿಳೆಯರನ್ನು ತಡೆದು ತಪಾಸಣೆ ನಡೆಸಿದಾಗ ಕಳ್ಳಸಾಗಣೆ ಬೆಳಕಿಗೆ ಬಂದಿತ್ತು.
ಪ್ರಯಾಣಿಕರು ಶೂ ಸಾಕ್ಸ್, ಉಡುಪುಗಳು, ಪ್ಯಾಂಟ್ ಪಾಕೆಟ್‌ಗಳು, ಒಳ ಉಡುಪುಗಳು ಮತ್ತು ಕರವಸ್ತ್ರಗಳಲ್ಲಿ ಮರೆಮಾಚಿ ಬಂಗಾರ ಸಾಗಿಸುತ್ತಿದ್ದರು. ಕೂಡಲೇ ಪ್ರಯಾಣಿಕರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹2 ಕೋಟಿ ಮೌಲ್ಯದ ಚಿನ್ನ ವಶಕ್ಕೆ