ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ವಿಜೃಂಭಣೆಯಿಂದ ನೆರವೇರಿದ ತೆಪ್ಪೋತ್ಸವ: ವಿಡಿಯೋ - CHAMUNDESHWARI TEPPOTSAVA
Published : Oct 19, 2024, 3:25 PM IST
ಮೈಸೂರು: ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಶುಕ್ರವಾರ ಸಂಜೆ ಚಾಮುಂಡೇಶ್ವರಿ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.
ತೆಪ್ಪೋತ್ಸವ ಹಿನ್ನೆಲೆ ಶುಕ್ರವಾರ ಬೆಳಗ್ಗೆಯಿಂದಲೇ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಧಾರ್ಮಿಕ ವಿಧಿ - ವಿಧಾನಗಳು ಆರಂಭಗೊಂಡಿದ್ದವು. ಅಮ್ಮನವರ ಪಲ್ಲಕ್ಕಿ ಉತ್ಸವವು ಪೂಜಾ ಕೈಂಕರ್ಯದೊಂದಿಗೆ ಚಾಮುಂಡೇಶ್ವರಿ ದೇವಸ್ಥಾನದಿಂದ ಹೊರಟು ರಥದ ಬೀದಿಯ ಮೂಲಕ ಸಾಗಿ ದೇವಿಕೆರೆ ಅಂಗಳಕ್ಕೆ ಮೆರವಣಿಗೆ ಮೂಲಕ ಬಂದು ತಲುಪಿತು. ನಂತರ ಸಂಜೆಯವರೆಗೂ ವಿವಿಧ ಪೂಜಾ ಕೈಂಕರ್ಯದೊಂದಿಗೆ ಅವಭೃತ ತೀರ್ಥಸ್ನಾನ ಮಾಡಿಸಲಾಯಿತು.
ಸಂಜೆ 6:45ರ ವೇಳೆಗೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ತೆಪ್ಪದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನಿರಿಸಿ 7:30ರ ವರೆಗೂ ದೇವಿಕೆರೆಯಲ್ಲಿ 3 ಸುತ್ತು ಪ್ರದಕ್ಷಣೆ ಹಾಕಿಸಲಾಯಿತು. ಈ ವೇಳೆ ಆಗಮಿಸಿದ್ದ ಸಾವಿರಾರು ಭಕ್ತರು ಚಾಮುಂಡೇಶ್ವರಿ ದರ್ಶನ ಪಡೆದರಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪೊಲೀಸ್ ಬ್ಯಾಂಡ್, ಮಂಗಳ ವಾದ್ಯಗೋಷ್ಠಿ ಮೇಳೈಸಿತ್ತು. ಬಳಿಕ ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ದೇವಿಕೆರೆಯಲ್ಲಿ ತೆಪ್ಪೋತ್ಸವ ಸಂಪನ್ನಗೊಂಡ ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ಹೂವಿನ ಅಲಂಕೃತ ಪಲ್ಲಕ್ಕಿಯಲ್ಲಿರಿಸಿ ಪೂಜೆ ನೆರವೇರಿಸಲಾಯಿತು. ಅಲ್ಲಿಂದ ಅಮ್ಮನವರ ಚಿನ್ನದ ಪಲ್ಲಕ್ಕಿ ಉತ್ಸವ ವಿವಿಧ ಮಂತ್ರ ಜಯ ಘೋಷಗಳೊಂದಿಗೆ ಮೆರವಣಿಗೆ ಮೂಲಕ ರಾತ್ರಿ 8:30 ಸುಮಾರಿಗೆ ಸ್ವಸ್ಥಾನ ತಲುಪಿತು. ದೇವಾಲಯದೊಳಗೆ ಧ್ವಜಾರೋಹಣ ನಡೆಸಿ, ಮೂಲ ದೇವಿ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.
ಇದನ್ನೂ ಓದಿ: ವಿಜೃಂಭಣೆಯಿಂದ ನೆರವೇರಿದ ಮೈಸೂರು ಶ್ರೀ ಚಾಮುಂಡೇಶ್ವರಿ ರಥೋತ್ಸವ: ವಿಡಿಯೋ