ರಾಮಮಂದಿರ ವಿಚಾರದಲ್ಲಿ ರಾಜಕೀಯ ಸಲ್ಲದು: ಶಾಸಕ ಶಿವರಾಮ ಹೆಬ್ಬಾರ್ - Ram Mandir
Published : Jan 21, 2024, 9:26 AM IST
|Updated : Jan 21, 2024, 9:46 AM IST
ಶಿರಸಿ: ರಾಮಮಂದಿರ ಇಡೀ ದೇಶ, ವಿಶ್ವ ಹಾಗು ಹಿಂದೂ ಸಮಾಜಕ್ಕೆ ಹೆಮ್ಮೆ ತರುವಂಥದ್ದು. ಇದರಲ್ಲಿ ರಾಜಕೀಯ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಶಿರಸಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ರಾಮಮಂದಿರಕ್ಕೆ ನನ್ನದೇ ಆದ ಕೊಡುಗೆ ನೀಡಿದ್ದೇನೆ. ಜೊತೆಗೆ, ಕ್ಷೇತ್ರದಲ್ಲಿ ಏನೇನು ಮಾಡಬೇಕೋ ಅದಕ್ಕೆ ವ್ಯವಸ್ಥೆ ಮಾಡಿದ್ದೇನೆ ಎಂದರು.
ಮಂದಿರ ಉದ್ಘಾಟನೆಯ ನಿಮಿತ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅನ್ನದಾನ ಮಾಡಲಾಗುತ್ತಿದೆ. ಎಲ್ಲರೂ ಶ್ರದ್ಧಾ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಇಡೀ ದೇಶದ ಜನರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ರಾಮ ಮಂದಿರ ನಿರ್ಮಾಣ ಕಾರ್ಯ ನಡೆದಿದೆ ಎಂದು ತಿಳಿಸಿದರು.
ಕದಂಬೋತ್ಸವದ ಕುರಿತು ಮಾತನಾಡುತ್ತಾ, ಕದಂಬೋತ್ಸವಕ್ಕೆ 2 ಕೋಟಿ ರೂ. ಅನುದಾನ ಅಗತ್ಯವಿರುವ ಬಗ್ಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಜೊತೆ ಮಾತನಾಡಿ, ಹಣ ಬಿಡುಗಡೆಗೊಳಿಸಿದ ಕೂಡಲೇ ಕದಂಬೋತ್ಸವ ಆಗುತ್ತದೆ ಎಂದರು.
ಮುಂದುವರೆದು ಮಾತನಾಡಿ, ಮಳೆ ಕೊರತೆಯಿಂದ ನದಿಗಳಲ್ಲಿ ನೀರು ಕಡಿಮೆಯಾಗಿದೆ. ಇದರಿಂದ ಕೆರೆ ತುಂಬುವ ಯೋಜನೆ ಈ ಬಾರಿಯೂ ಫಲ ನೀಡುವುದಿಲ್ಲ. ಭವಿಷ್ಯದಲ್ಲಾದರೂ ಇಂಥ ತೊಂದರೆ ತಪ್ಪುವಂತಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ರಾಮಮಂದಿರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ಕಾಂಗ್ರೆಸ್ ತೀರ್ಮಾನ ದುರ್ದೈವದ ಸಂಗತಿ: ಯಡಿಯೂರಪ್ಪ