ಹಾವೇರಿ: ವಿಜೃಂಭಣೆಯಿಂದ ನಡೆದ ಆಡೂರು ಮಾಲತೇಶ ಜಾತ್ರೆ-ವಿಡಿಯೋ - Adooru Malatesh jatra - ADOORU MALATESH JATRA
Published : May 26, 2024, 12:32 PM IST
ಹಾವೇರಿ: ಉತ್ತರ ಕರ್ನಾಟಕದ ಈ ವರ್ಷದ ಕೊನೆಯ ಜಾತ್ರೆ ಎಂದೇ ಕರೆಸಿಕೊಳ್ಳುವ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಮಾಲತೇಶ ಜಾತ್ರೆ ಶನಿವಾರ ವಿಜೃಂಭಣೆಯಿಂದ ನಡೆಯಿತು. ಮಾಲತೇಶನ ಉತ್ಸವ ಮೂರ್ತಿಯಿರುವ ರಥ ಎಳೆದು ಭಕ್ತರು ಸಂಭ್ರಮಿಸಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿದ ರಥದೆದುರು ಭಕ್ತರು ಕಾಯಿ, ಹಣ್ಣು ನೈವೇದ್ಯ ಅರ್ಪಿಸಿದರು.
ರಥೋತ್ಸವ ಬಸ್ ನಿಲ್ದಾಣದ ಮುಂದೆ ಬರುತ್ತಿದ್ದಂತೆ ಆಡೂರು ಮತ್ತು ಸುತ್ತಮುತ್ತಲ ಗ್ರಾಮಗಳ ಕುರುಬ ಜನಾಂಗದವರು ತಮ್ಮ ಕುರಿ ಹಿಂಡುಗಳನ್ನು ರಥದ ಸುತ್ತ ಪ್ರದಕ್ಷಿಣೆ ಹಾಕಿಸಿದರು. ಈ ರೀತಿ ರಥಕ್ಕೆ ಪ್ರದಕ್ಷಿಣೆ ಹಾಕಿಸಿದರೆ ತಮ್ಮ ಕುರಿಹಿಂಡುಗಳಿಗೆ ಯಾವುದೇ ರೋಗ-ರುಜಿನಗಳು ಬರುವುದಿಲ್ಲ ಎಂಬ ನಂಬಿಕೆ ಕುರುಬ ಜನಾಂಗದವರಲ್ಲಿದೆ. ಇದರ ಜೊತೆಗೆ, ನೂತನ ದಂಪತಿ ರಥದ ಕಳಸ ನೋಡಿ ಪ್ರಾರ್ಥಿಸಿದರೆ ದಾಂಪತ್ಯ ಸುಖಮಯವಾಗಿರುತ್ತದೆ ಎಂಬ ನಂಬಿಕೆಯೂ ಇದೆ.
ರಥ ಸಾಗಿ ಬಂದ ಮಾರ್ಗದುದ್ದಕ್ಕೂ ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು ಉತ್ತತ್ತಿ ಎಸೆದು ಭಕ್ತಿಭಾವ ಮೆರೆದರು. 'ಏಳುಕೋಟಿ ಏಳುಕೋಟಿ ಜಾಂಗಮಲೋ ಜಾಂಗಮಲೋ' ಎಂದು ಘೋಷಣೆ ಮೊಳಗಿಸಿದರು. ಡೊಳ್ಳು ಕುಣಿತ ಸೇರಿದಂತೆ ವಿವಿಧ ತಂಡಗಳ ಕಲಾ ಪ್ರದರ್ಶನ ಗಮನ ಸೆಳೆಯಿತು.