ಹೈದರಾಬಾದ್:ಮಣ್ಣಿನ ಪ್ರಾಮುಖ್ಯತೆ ಮತ್ತು ಮಣ್ಣಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಬಗ್ಗೆ ಜನರಿಗೆ ತಿಳಿಸಲು ಹಾಗೂ ಸಂರಕ್ಷಣೆ ಹಾಗೂ ಸುಕ್ಷಿತಗೊಳಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 5 ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ.
ಹಿನ್ನೆಲೆ: 2002 ರಲ್ಲಿ ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನಗಳ ಒಕ್ಕೂಟವು (IUSS) ಮಣ್ಣಿನ ಮಹತ್ವ ಸಾರುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಣ್ಣಿನ ದಿನ ಆಚರಣೆಗೆ ಶಿಫಾರಸು ಮಾಡಿತ್ತು. ಥಾಯ್ಲೆಂಡ್ ನಾಯಕತ್ವದಲ್ಲಿ ಮತ್ತು ಜಾಗತಿಕ ಮಣ್ಣಿನ ಪಾಲುದಾರಿಕೆಯ ಚೌಕಟ್ಟಿನೊಳಗೆ, FAO ವಿಶ್ವ ಮಣ್ಣಿನ ಔಪಚಾರಿಕ ಸ್ಥಾಪನೆ ಬೆಂಬಲಿಸಿತು. ಈ ಮೂಲಕ ಡಿಸೆಂಬರ್ 5 ರಂದು ಮಣ್ಣಿನ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವ ವೇದಿಕೆಯಾಗಿ ಈ ದಿನವನ್ನು ಆಚರಣೆ ಮಾಡಲು ಶುರು ಮಾಡಲಾಗಿದೆ.
FAO ಸಮ್ಮೇಳನವು ಜೂನ್ 2013 ರಲ್ಲಿ ವಿಶ್ವ ಮಣ್ಣಿನ ದಿನವನ್ನು ಆಚರಿಸುವುದಕ್ಕೆ ಸರ್ವಾನುಮತದ ಅನುಮೋದನೆ ನೀಡಿತ್ತು. 68 ನೇ UN ಜನರಲ್ ಅಸೆಂಬ್ಲಿಯಲ್ಲಿ ಈ ನಿರ್ಣಯವನ್ನು ಅಧಿಕೃತವಾಗಿ ಅಳವಡಿಸಿಕೊಳ್ಳಲು ವಿನಂತಿಸಿತು. ಡಿಸೆಂಬರ್ 2013 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ 5 ಡಿಸೆಂಬರ್ 2014 ಅನ್ನು ಮೊದಲ ಅಧಿಕೃತ ವಿಶ್ವ ಮಣ್ಣಿನ ದಿನವೆಂದು ಗೊತ್ತುಪಡಿಸುವ ಮೂಲಕ, ಅನುಮೋದನೆ ನೀಡಿತು. ಡಿಸೆಂಬರ್ 5 ನ್ನೇ ಆಯ್ಕೆ ಮಾಡಿದ್ದು ಏಕೆಂದರೆ ಥಾಯ್ಕೆಂಡ್ ರಾಜ H.M ಕಿಂಗ್ ಭೂಮಿಬೋಲ್ ಅದುಲ್ಯದೇಜ್ ಅವರ ಅಧಿಕೃತ ಜನ್ಮದಿನದ ಹಿನ್ನೆಲೆಯಲ್ಲಿ ಅಂದೇ ಈ ದಿನ ಆಚರಣೆ ಮಾಡಲು ನಿರ್ಧರಿಸಲಾಯಿತು. ಏಳು ದಶಕಗಳ ಕಾಲ ರಾಷ್ಟ್ರದ ಮುಖ್ಯಸ್ಥರಾಗಿ ಅಕ್ಟೋಬರ್ 2016 ರಲ್ಲಿ ನಿಧನರಾದ ಥಾಯ್ಲೆಂಡ್ ರಾಜನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ವರ್ಷದ ಆಚರಣೆಯು ಅಂದರೆ 2024 ಮಹತ್ವದ್ದಾಗಿದೆ. ಏಕೆಂದರೆ ಇದು ಜಾಗತಿಕವಾಗಿ 10 ನೇ ಆಚರಣೆಯಾಗಿದೆ ಮತ್ತು ಥಾಯ್ಲೆಂಡ್ ಸಾಮ್ರಾಜ್ಯದಿಂದ ಈ ದಿನವನ್ನು ಆಯೋಜಿಸಲಾಗುತ್ತಿದೆ.
ಥೀಮ್: ಈ ವರ್ಷದ ವಿಶ್ವ ಮಣ್ಣಿನ ದಿನಾಚರಣೆಯ ವಿಷಯ ಎಂದರೆ ಅದು 'ಮಣ್ಣಿನ ಆರೈಕೆ: ಅಳತೆ, ಮೇಲ್ವಿಚಾರಣೆ ಮತ್ತು ನಿರ್ವಹಣೆ'ಯಾಗಿದೆ. ಮಣ್ಣಿನ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಿಖರವಾದ ಮಣ್ಣಿನ ಡೇಟಾ ಮತ್ತು ಮಾಹಿತಿಯ ಪ್ರಾಮುಖ್ಯತೆಯನ್ನು ಈ ದಿನವು ಒತ್ತಿ ಹೇಳುತ್ತದೆ. ಅಷ್ಟೇ ಅಲ್ಲ ಆಹಾರ ಭದ್ರತೆಗಾಗಿ ಸುಸ್ಥಿರ ಮಣ್ಣಿನ ನಿರ್ವಹಣೆ ಬಗ್ಗೆ ತಿಳಿವಳಿಕೆ ನೀಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
ಮಣ್ಣಿನ ಮಹತ್ವ: ಭೂಮಿಯ ಮೇಲಿನ ಜೀವನಕ್ಕೆ ಮಣ್ಣು ಅತ್ಯಗತ್ಯ - ಇದು ಪೋಷಕಾಂಶಗಳು, ನೀರು ಮತ್ತು ಖನಿಜಗಳನ್ನು ಒದಗಿಸುವ ಮೂಲಕ ಸಸ್ಯ ಮತ್ತು ಮರಗಳ ಏಳಿಗೆ ಜೀವನ ಮತ್ತು ಬದುಕು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಲಕ್ಷಾಂತರ ಕೀಟಗಳು, ಬ್ಯಾಕ್ಟೀರಿಯಾಗಳು ಮತ್ತು ಸಣ್ಣ ಪ್ರಾಣಿಗಳಿಗೆ ನೆಲೆಯಾಗಿದೆ. ಆರೋಗ್ಯಕರ ಮಣ್ಣು ಇಲ್ಲದೇ, ನಾವು ಬೆಳೆಗಳನ್ನು ಅಥವಾ ಇತರ ಉಪಯುಕ್ತ ಸಸ್ಯಗಳನ್ನು ಬೆಳೆಯುವುದು ಅಸಾಧ್ಯ. ಇನ್ನು ಜಾನುವಾರುಗಳ ಬದುಕು ಅಥವಾ ಆಶ್ರಯಕ್ಕೆ ಮಣ್ಣು ಬೇಕೇ ಬೇಕು. ಆರೋಗ್ಯಕರ ಮಣ್ಣು ನೀರನ್ನು ಸಂಗ್ರಹಿಸುತ್ತದೆ ಮತ್ತು ಫಿಲ್ಟರ್ ಮಾಡುತ್ತದೆ, ಪೋಷಕಾಂಶಗಳನ್ನು ಮರುಬಳಕೆ ಮಾಡುತ್ತದೆ ಮತ್ತು ಹೆಚ್ಚಿನ ಪ್ರಮಾಣದ ಇಂಗಾಲವನ್ನು ಸಂಗ್ರಹಿಸುವ ಮೂಲಕ ಹವಾಮಾನ ಬದಲಾವಣೆಯ ಋಣಾತ್ಮಕ ಪರಿಣಾಮಗಳನ್ನು ಎದುರಿಸಲು ನಮಗೆ ಸಹಾಯ ಮಾಡುತ್ತದೆ.
ಹೀಗಾಗಿ ಮಣ್ಣು ಎಲ್ಲರಿಗೂ ಅಂದರೆ ಸಕಲ ಜೀವಾತ್ಮಗಳಿಗೂ ಅಗತ್ಯವಾಗಿದೆ.