ಹೈದರಾಬಾದ್: ಪ್ರತಿ ವರ್ಷ ಮಾರ್ಚ್ 23 ರಂದು ವಿಶ್ವ ಹವಾಮಾನ ದಿನ ಆಚರಿಸಲಾಗುತ್ತದೆ. ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ)ಯ ಸ್ಥಾಪನೆಯ ನೆನಪಿಗಾಗಿ ಈ ದಿನ ಆಚರಿಸಲಾಗುತ್ತದೆ. ಭೂಮಿಯ ವಾತಾವರಣ ಹೇಗಿದೆ ಎಂಬ ಬಗ್ಗೆ ಈ ದಿನದಂದು ಪರಾಮರ್ಶಿಸಲಾಗುತ್ತದೆ. ಭೂಮಿಯ ವಾತಾವರಣವನ್ನು ರಕ್ಷಿಸುವಲ್ಲಿ ಜನರ ಪಾತ್ರದ ಬಗ್ಗೆ ಈ ದಿನದಂದು ಜಾಗೃತಿ ಮೂಡಿಸಲಾಗುತ್ತದೆ.
ಮುಂದಿನ ದಿನಗಳಲ್ಲಿ ಹವಾಮಾನ ಹೇಗಿರುತ್ತದೆ ಎಂಬ ಮುನ್ಸೂಚನೆಗಳು ಮಾತ್ರವೇ ಇನ್ನು ಮುಂದೆ ಸಾಕಾಗುವುದಿಲ್ಲ. ಜೀವ ಮತ್ತು ಜೀವನೋಪಾಯಗಳ ಮೇಲೆ ಪ್ರಸ್ತುತ ಹವಾಮಾನ ಪರಿಸ್ಥಿತಿಗಳು ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಪರಿಣಾಮ ಆಧಾರಿತ ಮುನ್ಸೂಚನೆಗಳು ಇಂದಿನ ಅಗತ್ಯವಾಗಿವೆ. ಈಗಲೂ ವಿಶ್ವದ ಪ್ರತಿ ಮೂವರು ವ್ಯಕ್ತಿಗಳ ಪೈಕಿ ಒಬ್ಬರಿಗೆ ಹವಾಮಾನ ಮುನ್ಸೂಚನೆಗಳು ತಲುಪುತ್ತಿಲ್ಲ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಹೇಳಿದೆ.
ವಿಶ್ವ ಹವಾಮಾನ ದಿನ 2024 ರ ಥೀಮ್:ವಿಶ್ವ ಹವಾಮಾನ ದಿನವನ್ನು ಪ್ರತಿವರ್ಷ ವಿಭಿನ್ನ ವಿಷಯದೊಂದಿಗೆ ಆಚರಿಸಲಾಗುತ್ತದೆ. 2024 ರ ವಿಶ್ವ ಹವಾಮಾನ ದಿನದ ಥೀಮ್ 'ಹವಾಮಾನ ರಕ್ಷಣೆಗಾಗಿ ಕಟಿಬದ್ಧ' (At the Frontline of Climate Action) ಎಂದಾಗಿದೆ.
ವಿಶ್ವ ಹವಾಮಾನ ದಿನದ ಇತಿಹಾಸ: ಮಾರ್ಚ್ 23, 1950 ರಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಸ್ಥಾಪನೆಯ ನೆನಪಿಗಾಗಿ ವಿಶ್ವ ಹವಾಮಾನ ದಿನವನ್ನು ಆಚರಿಸಲಾಗುತ್ತದೆ. ಡಬ್ಲ್ಯುಎಂಒ ಪ್ರಧಾನ ಕಚೇರಿಯು ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿದೆ. ಅಂತರರಾಷ್ಟ್ರೀಯ ಹವಾಮಾನ ಸಂಸ್ಥೆ (ಐಎಂಒ) ಸಂಸ್ಥೆಯು ವಿಶ್ವ ಹವಾಮಾನ ಸಂಸ್ಥೆಗೆ ಅಡಿಪಾಯ ಹಾಕಿತು. ಇದನ್ನು 1873 ರಲ್ಲಿ ವಿಯೆನ್ನಾ ಅಂತರರಾಷ್ಟ್ರೀಯ ಹವಾಮಾನ ಕಾಂಗ್ರೆಸ್ ಪರಿಶೀಲಿಸಿತು. ಡಬ್ಲ್ಯುಎಂಒ ಸಮಾವೇಶದ ಅನುಮೋದನೆಯೊಂದಿಗೆ ಅಂತಿಮವಾಗಿ 1950 ರಲ್ಲಿ ಡಬ್ಲ್ಯೂಎಂಒ ಅನ್ನು ಕಾರ್ಯರೂಪಕ್ಕೆ ತರಲಾಯಿತು. ಡಬ್ಲ್ಯುಎಂಒ ಸ್ಥಾಪನೆಯಾದ ಸುಮಾರು ಒಂದು ವರ್ಷದ ನಂತರ ಇದು ವಿಶ್ವಸಂಸ್ಥೆಯ (ಯುಎನ್) ವಿಶೇಷ ಸಂಸ್ಥೆಯಾಯಿತು.
ವಿಶ್ವ ಹವಾಮಾನ ದಿನದ ಮಹತ್ವ: ವಿಶ್ವ ಹವಾಮಾನ ದಿನವು ಒಂದು ಮಹತ್ವದ ದಿನವಾಗಿದೆ. ಪ್ರಪಂಚದಾದ್ಯಂತದ ಜನರ ಮೇಲೆ ಪರಿಣಾಮ ಬೀರುವ ವಿವಿಧ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.