ನವದೆಹಲಿ: ಪರ್ಸಿವೆರೆನ್ಸ್ ಮಾರ್ಸ್ ರೋವರ್ ಮಿಷನ್ ಇದೇ ಮೊದಲ ಬಾರಿಗೆ ಮಂಗಳ ಗ್ರಹದಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಿ ಶಿಲಾ ಸಂಯೋಜನೆಯ ನೈಜ-ಸಮಯದ ವಿಶ್ಲೇಷಣೆ ಮಾಡಿದೆ ನಾಸಾದ ಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ವಿಶ್ಲೇಷಣೆಯ ಆಧಾರದ ಮೇಲೆ ಅದು ಸ್ವತಃ ತಾನೇ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಯಾವುದೇ ಬಾಹ್ಯ ಸಹಾಯವಿಲ್ಲದೆ ಸ್ವತಃ ತಾನಾಗಿಯೇ ಮಂಗಳ ಗ್ರಹದ ಬಂಡೆಗಳೊಳಗಿನ ಖನಿಜಗಳನ್ನು ಗುರುತಿಸಲು ರೋವರ್ ಮಿಷನ್ ಸುಮಾರು ಮೂರು ವರ್ಷಗಳಿಂದ ಎಐ ಅನ್ನು ಬಳಸುತ್ತಿದೆ. ಆದರೆ ಬಂಡೆಯ ಸಂಯೋಜನೆಯ ಬಗ್ಗೆ ನೈಜ ಸಮಯದ ನಿರ್ಧಾರಗಳನ್ನು ತೆಗೆದುಕೊಳ್ಳಲು ರೋವರ್ ಮಿಷನ್ ಮಂಗಳ ಗ್ರಹದಲ್ಲಿ ಎಐ ತಂತ್ರಜ್ಞಾನ ಬಳಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ
ಈ ಬೆಳವಣಿಗೆಗಳು ಭವಿಷ್ಯದ "ಸ್ಮಾರ್ಟ್" ಬಾಹ್ಯಾಕಾಶ ನೌಕೆಯ ಕಡೆಗೆ ಭರವಸೆಯ ಹೆಜ್ಜೆಗಳಾಗಿವೆ. ಯಾವ ಡೇಟಾವನ್ನು ಸಂಗ್ರಹಿಸಬೇಕು, ಅದನ್ನು ಎಲ್ಲಿ ಕಂಡುಹಿಡಿಯಬೇಕು ಮತ್ತು ಅದನ್ನು ಹೇಗೆ ವಿಶ್ಲೇಷಿಸಬೇಕು ಎಂಬುದನ್ನು ಸ್ವತಂತ್ರವಾಗಿ ನಿರ್ಧರಿಸುವ ಸಾಮರ್ಥ್ಯವನ್ನು ಎಐ ಪ್ರದರ್ಶಿಸಿದೆ. ಮಂಗಳ ಗ್ರಹವನ್ನು ಮತ್ತಷ್ಟು ಉತ್ತಮವಾಗಿ ಅರ್ಥ ಮಾಡಿಕೊಳ್ಳುವ ವಿಜ್ಞಾನಿಗಳ ಪ್ರಯತ್ನಕ್ಕೆ ಇದೊಂದು ಮೈಲುಗಲ್ಲಾಗಿದೆ.
ನಾಸಾದ ಪರ್ಸಿವೆರೆನ್ಸ್ ರೋವರ್ ಎಐ ಮತ್ತು ಅದರ ಪಿಕ್ಸ್ಎಲ್ (PIXL) ಉಪಕರಣವನ್ನು ಬಳಸಿಕೊಂಡು ಬಂಡೆಯಲ್ಲಿ ಎಲ್ಲಿ, ಯಾವಾಗ ರಂಧ್ರ ಕೊರೆಯಬೇಕೆಂಬುದನ್ನು ನಿರ್ಧರಿಸುತ್ತದೆ ಹಾಗೂ ಆ ಮೂಲಕ ಹೊರತೆಗೆಯಲಾದ ಮಂಗಳ ಗ್ರಹದ ಮೇಲಿನ ಮಣ್ಣು, ಕಲ್ಲುಗಳ ಸ್ಯಾಂಪಲ್ಗಳನ್ನು ಭೂಮಿಗೆ ಮರಳಿ ತೆಗೆದುಕೊಂಡು ಹೋಗುವ ಸಲುವಾಗಿ ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ.
"ಪ್ರಮುಖ ವೈಜ್ಞಾನಿಕ ಮಾಹಿತಿಗಳನ್ನು ತಿಳಿದುಕೊಳ್ಳಲು ನಾವು ಪಿಕ್ಸ್ಎಲ್ನ ಎಐ ಅನ್ನು ಬಳಸುತ್ತೇವೆ" ಎಂದು ಉಪಕರಣದ ಪ್ರಧಾನ ತನಿಖಾಧಿಕಾರಿ, ದಕ್ಷಿಣ ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ (ಜೆಪಿಎಲ್) ಅಬಿಗೈಲ್ ಆಲ್ವುಡ್ ಹೇಳಿದರು.