Electric Cars Overtake Petrol Cars: ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನಗಳ ಅವಲಂಬನೆಯನ್ನು ತಗ್ಗಿಸಲು ಪ್ರಪಂಚಾದ್ಯಂತ ಅನೇಕ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಎಲೆಕ್ಟ್ರಿಕ್ ವಾಹನಗಳು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಪ್ರಪಂಚದ ಹಲವು ದೇಶಗಳು ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಮುಂದಾಗುತ್ತಿವೆ. ಭಾರತದಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಕೇಂದ್ರ ಸರ್ಕಾರ ಸಬ್ಸಿಡಿ ಸೇರಿದಂತೆ ಇತರೆ ಆಫರ್ಗಳನ್ನು ನೀಡುತ್ತಿದೆ. ಆದರೆ ಪ್ರಸ್ತುತ ಭಾರತದಂತಹ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಸೀಮಿತ. ಆದರೆ ಈಗಿರುವ ಪೆಟ್ರೋಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿರುವ ವಿಶ್ವದ ಮೊದಲ ದೇಶವೆಂಬ ಹೆಗ್ಗಳಿಕೆಗೆ ನಾರ್ವೆ ಪಾತ್ರವಾಗಿದೆ.
ನಾರ್ವೇಜಿಯನ್ ರೋಡ್ ಫೆಡರೇಶನ್ ಬಿಡುಗಡೆ ಮಾಡಿದ ವಾಹನ ನೋಂದಣಿ ಮಾಹಿತಿಯ ಪ್ರಕಾರ, ಆ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ನಾರ್ಡಿಕ್ ದೇಶದಲ್ಲಿ ನೋಂದಾಯಿಸಲಾದ 2.8 ಮಿಲಿಯನ್ ಖಾಸಗಿ ಪ್ರಯಾಣಿಕ ಕಾರುಗಳ ಪೈಕಿ 7,54,303 ಯುನಿಟ್‌ಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿವೆ. ದೇಶದಲ್ಲಿ 7,53,905 ಯೂನಿಟ್ ಪೆಟ್ರೋಲ್ ಕಾರುಗಳಿವೆ. ಇದಲ್ಲದೇ ಡೀಸೆಲ್‌ನಲ್ಲಿ ಚಲಿಸುವ ಕಾರುಗಳ ನೋಂದಣಿ ಕಡಿಮೆಯಾಗಿದೆ.
ಫೆಡರೇಶನ್ ನಿರ್ದೇಶಕ ಓವಿಂದ್ ಸೋಲ್ಬರ್ಗ್ ಥೋರ್ಸೆನ್ ಮಾತನಾಡಿ, "ಇದು ಐತಿಹಾಸಿಕ. 10 ವರ್ಷಗಳ ಹಿಂದೆ ಕೆಲವೇ ಜನ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಚಲಿಸುವ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಹೆಚ್ಚೆಂದು ಭಾವಿಸಿದ್ದರು. ಪ್ರಮುಖ ತೈಲ ಮತ್ತು ಅನಿಲ ಉತ್ಪಾದಿಸುವ ರಾಷ್ಟ್ರವಾದ ನಾರ್ವೆ 2025ರ ವೇಳೆಗೆ ಶೂನ್ಯ ಹೊರಸೂಸುವಿಕೆ ವಾಹನಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಕಳೆದ ಆಗಸ್ಟ್‌ನಲ್ಲಿ, ನಾರ್ವೆಯಲ್ಲಿ ದಾಖಲಾದ ಶೇ 94.3 ಹೊಸ ಕಾರುಗಳು ಎಲೆಕ್ಟ್ರಿಕ್ ಕಾರುಗಳಾಗಿವೆ" ಎಂದು ಮಾಹಿತಿ ನೀಡಿದರು.
ಇದು ಸಾಧ್ಯವಾಗಿದ್ದು ಹೇಗೆ?: ಹಲವು ವರ್ಷಗಳ ಹಿಂದೆಯೇ ನಾರ್ವೆ ಈ ಯಶಸ್ಸಿಗೆ ಅಡಿಪಾಯ ಹಾಕಿತ್ತು. 1990ರ ದಶಕದ ಆರಂಭದಿಂದಲೂ, ಅಲ್ಲಿನ ಸರ್ಕಾರ ಮತ್ತು ಸ್ಥಳೀಯ ಜನ ಎಲೆಕ್ಟ್ರಿಕ್ ವಾಹನಗಳೇ ಭವಿಷ್ಯ ಎಂದು ಅರ್ಥಮಾಡಿಕೊಂಡಿದ್ದರು. ನಾರ್ವೇಜಿಯನ್ ಸಂಸತ್ತು 2025ರ ಹೊತ್ತಿಗೆ ಮಾರಾಟವಾಗುವ ಎಲ್ಲ ಹೊಸ ಕಾರುಗಳು ಶೂನ್ಯ-ಹೊರಸೂಸುವಿಕೆ (ವಿದ್ಯುತ್ ಅಥವಾ ಹೈಡ್ರೋಜನ್) ಆಗಿರಬೇಕು ಎಂಬ ರಾಷ್ಟ್ರೀಯ ಗುರಿ ನಿಗದಿಪಡಿಸಿತು. 2022ರ ಅಂತ್ಯದ ಸುಮಾರಿಗೆ, ನಾರ್ವೆಯಲ್ಲಿ ನೋಂದಾಯಿಸಲಾದ ಶೇ 20ಕ್ಕಿಂತ ಹೆಚ್ಚು ಕಾರುಗಳು ಬ್ಯಾಟರಿ ಎಲೆಕ್ಟ್ರಿಕ್ (BEV) ಆಗಿದ್ದವು. 2022ರಲ್ಲಿ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಪಾಲು ಶೇ 79.2ರಷ್ಟಿತ್ತು.
ಪ್ರಪಂಚದ ಅನೇಕ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವ ಯೋಜನೆಗಳು ನಡೆಯುತ್ತಿವೆ. ಆದರೆ 55 ಲಕ್ಷ ಜನಸಂಖ್ಯೆಯ ಈ ಪುಟ್ಟ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸರ್ಕಾರ ಮತ್ತು ಸಾರ್ವಜನಿಕರು ತೋರಿದ ಜಾಗೃತಿ ಎಲ್ಲಕ್ಕಿಂತ ವಿಭಿನ್ನ. EVಗಳನ್ನು ಪ್ರೋತ್ಸಾಹಿಸಲು ಸರ್ಕಾರ ಅನೇಕ ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ಇದು ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಕೈಗೆಟುಕುವ ಮತ್ತು ಸುಲಭವಾಗಿಸಿತು. ದೈನಂದಿನ ಚಾಲನೆಯ ವೆಚ್ಚವನ್ನೂ ಗಣನೀಯವಾಗಿ ಕಡಿಮೆಗೊಳಿಸಿತು. ಇದಕ್ಕೆ ಎಲ್ಲ ರೀತಿಯ ವಿನಾಯಿತಿಗಳನ್ನೂ ನೀಡಲಾಗಿತ್ತು.
ತೆರಿಗೆ ನೀತಿ ಬದಲು:ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ದೊಡ್ಡ ಕೆಲಸವನ್ನು ಅದರ ಮೇಲೆ ವಿಧಿಸಲಾದ ತೆರಿಗೆಗೆ ಸಂಬಂಧಿಸಿದಂತೆ ಮಾಡಲಾಗಿದೆ. ನಾರ್ವೇಜಿಯನ್ ಸರ್ಕಾರವು ಹೆಚ್ಚಿನ ಹೊರಸೂಸುವಿಕೆ ಕಾರುಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸಬೇಕು ಮತ್ತು ಕಡಿಮೆ ಹಾಗೂ ಶೂನ್ಯ-ಹೊರಸೂಸುವ ಕಾರುಗಳ ಮೇಲೆ ಕಡಿಮೆ ತೆರಿಗೆಗಳನ್ನು ವಿಧಿಸಬೇಕು ಎಂದು ನಿರ್ಧರಿಸಿತು. ಅದರ ನಂತರ NOK (ನಾರ್ವೇಜಿಯನ್ ಕ್ರೋನ್) 5,00,000 (ಅಂದಾಜು ರೂ 40 ಲಕ್ಷ)ವರೆಗಿನ ಬೆಲೆಯ ಎಲೆಕ್ಟ್ರಿಕ್ ವಾಹನಗಳನ್ನು ವ್ಯಾಟ್‌ನಿಂದ ವಿನಾಯಿತಿ ನೀಡಿತು. NOK 500,000ಕ್ಕಿಂತ ಹೆಚ್ಚಿನ ಬೆಲೆಯ ವಾಹನಗಳಿಗೆ ಹೆಚ್ಚುವರಿ ಮೊತ್ತದ ಮೇಲೆ ಶೇ 25 ವ್ಯಾಟ್ ನಿಯಮವನ್ನು ಅನ್ವಯಿಸಿದೆ.