ನವದೆಹಲಿ: ಪ್ರಾಯೋಗಿಕ ಪ್ರಯತ್ನದಲ್ಲಿ ಬಾಹ್ಯಾಕಾಶ ಡಾಕಿಂಗ್ ಪ್ರಯೋಗಗಳ ನಿರ್ವಹಣೆಗೆ ಉಡಾವಣೆ ಮಾಡಲಾದ ಎರಡು ಉಪಗ್ರಹಗಳನ್ನು ಮೂರು ಮೀಟರ್ ಅಂತರದಷ್ಟು ಸಮೀಪಕ್ಕೆ ತಂದು ಬಳಿಕ ಮತ್ತೆ ಸುರಕ್ಷಿತವಾಗಿ ಮೊದಲಿನ ಸ್ಥಾನಕ್ಕೆ ಸೇರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಹೆಚ್ಚಿನ ಡಾಟಾ ವಿಶ್ಲೇಷಣೆಯ ಬಳಿಕ ಡಾಕಿಂಗ್ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಹೇಳಿದೆ.
''ಉಪಗ್ರಹಗಳನ್ನು 15 ಮೀ ದೂರ ಹಾಗೂ 3 ಮೀ ಅಂತರದ ಸಮೀಪಕ್ಕೆ ಕರೆತರುವ ಪ್ರಾಯೋಗಿಕ ಪ್ರಯತ್ನ ನಡೆಸಲಾಗಿದೆ. ಬಳಿಕ ಬಾಹ್ಯಾಕಾಶ ನೌಕೆಗಳನ್ನು ಸುರಕ್ಷಿತ ಅಂತರದಲ್ಲಿ ಮತ್ತೆ ಹಿಂದಕ್ಕೆ ಸರಿಸಲಾಗಿದೆ. ಈ ಪ್ರಕ್ರಿಯೆಯನ್ನು ಮತ್ತಷ್ಟು ವಿಶ್ಲೇಷಿಸಿದ ಬಳಿಕ ಡಾಕಿಂಗ್ ಕೈಗೊಳ್ಳಲಾಗುವುದು. ಮುಂದಿನ ಅಪ್ಡೇಟ್ಗಾಗಿ ಕಾಯಿರಿ'' ಎಂದು ಇಸ್ರೋ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಡಾಕಿಂಗ್ ಪ್ರದರ್ಶಿಸುವ ಗುರಿ ಹೊಂದಿರುವ ಸ್ಪಾಡೆಕ್ಸ್ ಮಿಷನ್ ಡಿಸೆಂಬರ್ 30ರಂದು ಉಡಾವಣೆಗೊಂಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 220 ಕಿಲೋಗ್ರಾಂಗಳ ಎರಡು ಉಪಗ್ರಹಗಳನ್ನು ಹೊತ್ತ PSLV C60 ರಾಕೆಟ್ ಅನ್ನು 475 ಕಿಲೋಮೀಟರ್ ವೃತ್ತಾಕಾರದ ಕಕ್ಷೆಗೆ ಸೇರಿಸಲಾಗಿತ್ತು.
ಒಂದೇ ತರನಾದ ಮಿಷನ್ಗಳ ಗುರಿ ಸಾಧನೆಗೆ ಬಹು ರಾಕೆಟ್ಗಳನ್ನು ಉಡಾವಣೆ ಮಾಡಿರುವಾಗ ಬಾಹ್ಯಾಕಾಶದಲ್ಲಿ ಡಾಕಿಂಗ್ ತಂತ್ರಜ್ಞಾನ ಅತ್ಯಗತ್ಯವಾಗಿರುತ್ತದೆ. ಈ ಮಿಷನ್ ಮೂಲಕ ಭಾರತವು ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗುವತ್ತ ಸಾಗುತ್ತಿದೆ.