ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಗುರುವಾರ ಸೆಮಿಕಂಡಕ್ಟರ್ ಘಟಕಕ್ಕೆ ಭೇಟಿ ನೀಡಿದರು. ಸಿಂಗಾಪುರದಲ್ಲಿ ಎಲೆಕ್ಟ್ರಾನಿಕ್ಸ್ ವಲಯದ ಪ್ರಮುಖ ಕೈಗಾರಿಕೆಗಳಲ್ಲಿ ಸಹಕಾರದ ಕುರಿತು ಉಭಯ ನಾಯಕರು ಚರ್ಚಿಸಿದರು. ವಾಂಗ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನ ಭೇಟಿಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ. ಸಿಂಗಾಪುರವು ಅದರ ಸಣ್ಣ ಗಾತ್ರದ ಹೊರತಾಗಿಯೂ ಸೆಮಿಕಂಡಕ್ಟರ್ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಎರಡು ಸೌಹಾರ್ದ ದೇಶಗಳ ನಡುವಿನ ವ್ಯಾಪಾರ ಅವಕಾಶಗಳ ದೃಷ್ಟಿಯಿಂದ ಪ್ರಧಾನಿ ಮೋದಿಯವರ ಸೆಮಿಕಂಡಕ್ಟರ್ ಉದ್ಯಮದ ಭೇಟಿಯನ್ನು ಪ್ರಮುಖವೆಂದು ಪರಿಗಣಿಸಲಾಗಿದೆ.
ಸೆಮಿಕಂಡಕ್ಟರ್ ಘಟಕಕ್ಕೆ ಪ್ರಧಾನಿ ಭೇಟಿ:ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಾಪುರದ ಸಹವರ್ತಿ ಲಾರೆನ್ಸ್ ವಾಂಗ್ ಅವರೊಂದಿಗೆ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಸಿಂಗಾಪುರ ಮೂಲದ ದೆಹಲಿಯಲ್ಲಿರುವ ಕಂಪನಿಯಾದ ಎಇಎಂ ಹೋಲ್ಡಿಂಗ್ಸ್ ಲಿಮಿಟೆಡ್‌ಗೆ ಸೆಪ್ಟೆಂಬರ್ 5 ರಂದು ಭೇಟಿ ನೀಡಿದರು. ಈ ಪ್ರಮುಖ ಉದ್ಯಮದಲ್ಲಿ ಸಹಕಾರದ ಮಾರ್ಗಗಳ ಕುರಿತು ಪ್ರಧಾನಿ ಮೋದಿ ಚರ್ಚಿಸಿದರು. ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ AEM ನ ಪಾತ್ರ, ಅದರ ಕಾರ್ಯಾಚರಣೆಗಳು ಬಗ್ಗೆ ಪ್ರಧಾನಿ ಮೋದಿಗೆ ವಿವರಿಸಲಾಯಿತು. ಈ ವೇಳೆ ಅನೇಕ ಇತರ ಸಿಂಗಾಪುರದ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. 11-13 ಸೆಪ್ಟೆಂಬರ್ 2024ರ ವರೆಗೆ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ SEMICON ಇಂಡಿಯಾ ಪ್ರದರ್ಶನದಲ್ಲಿ ಭಾಗವಹಿಸಲು ಸಿಂಗಾಪುರದ ಸೆಮಿಕಂಡಕ್ಟರ್ ಕಂಪನಿಗಳನ್ನು ಪ್ರಧಾನಮಂತ್ರಿ ಆಹ್ವಾನಿಸಿದರು.
ಪ್ರಧಾನಿ ಮೋದಿ ಟ್ವೀಟ್: ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ, "ನನ್ನ ಸ್ನೇಹಿತ ಪ್ರಧಾನಿ ಲಾರೆನ್ಸ್ ವಾಂಗ್ ಅವರೊಂದಿಗಿನ ಚರ್ಚೆಗಳು ಇಂದಿಗೂ ಮುಂದುವರೆದಿವೆ. ನಾವು ಭಾರತದಲ್ಲಿ ಅನೇಕ ಸಿಂಗಾಪುರಗಳನ್ನು ರಚಿಸಲು ಬಯಸುತ್ತೇವೆ. ಕೌಶಲ್ಯ, ತಂತ್ರಜ್ಞಾನ, ಆರೋಗ್ಯ, AI ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ನಾವು ಚರ್ಚೆ ನಡೆಸಿದ್ದೇವೆ. ಅವರು ವ್ಯಾಪಾರವನ್ನು ಉತ್ತೇಜಿಸಲು ಒಪ್ಪಿಕೊಂಡಿದ್ದಾರೆ. ಈ ದಿಕ್ಕಿನಲ್ಲಿ ನಾವು ಒಟ್ಟಾಗಿ ಪ್ರಯತ್ನಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ" ಎಂದು ಹೇಳಿದರು.
ನಾಲ್ಕು ಒಪ್ಪಂದಗಳಿಗೆ ಸಹಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ ಅವರ ಭೇಟಿಯ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಪಾಲುದಾರಿಕೆಯನ್ನು ಬಲಪಡಿಸಲು ನಾಲ್ಕು ತಿಳುವಳಿಕೆ ಪತ್ರಗಳಿಗೆ (ಎಂಒಯು) ಸಹಿ ಹಾಕಲಾಯಿತು. ಈ ಒಪ್ಪಂದಗಳು ಡಿಜಿಟಲ್ ತಂತ್ರಜ್ಞಾನದಲ್ಲಿ ಸಹಕಾರ, ಸೆಮಿಕಂಡಕ್ಟರ್ ವಲಯದಲ್ಲಿ ಪಾಲುದಾರಿಕೆ, ಶಿಕ್ಷಣದಲ್ಲಿ ಸಹಕಾರ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಒಳಗೊಂಡಿವೆ.