Samsung Galaxy Z Flip FE: ಮಾರುಕಟ್ಟೆಯಲ್ಲಿ ಫೋಲ್ಡಬಲ್ ಮೊಬೈಲ್‌ಗಳಿಗೆ ಒಳ್ಳೆಯ ಕ್ರೇಜ್ ಇದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ ದೈತ್ಯ ಸ್ಯಾಮ್‌ಸಂಗ್ ಇವುಗಳತ್ತ ಹೆಚ್ಚು ಗಮನ ಹರಿಸಿದೆ. ತನ್ನ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ವಿಸ್ತರಿಸುವ ಭಾಗವಾಗಿ ಮುಂದಿನ ವರ್ಷ ಮತ್ತೊಂದು ಹೊಸ ಫೋಲ್ಡಬಲ್ ಮೊಬೈಲ್ ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ.
ಮುಂದಿನ ವರ್ಷಾರಂಭದಲ್ಲಿ Samsung ತನ್ನ ಗ್ಯಾಲಕ್ಸಿ Z ಫ್ಲಿಪ್ ಸರಣಿಯ ಸ್ಮಾರ್ಟ್‌ಫೋನ್‌ನ ಹೆಚ್ಚು ಕೈಗೆಟುಕುವ ರೂಪಾಂತರವನ್ನು ಬಿಡುಗಡೆ ಮಾಡುತ್ತದೆ ಎಂದು ವರದಿಯಾಗಿದೆ. ಇದು 'Samsung Galaxy Z Flip FE' (ಫ್ಯಾನ್ ಆವೃತ್ತಿ) ಹೆಸರಿನಲ್ಲಿ ರಿಲೀಸ್ ಆಗಲಿದೆ. ಇದರ ಬಿಡುಗಡೆಯ ದಿನಾಂಕ ಖಚಿತವಾಗದಿದ್ದರೂ ಸ್ಯಾಮ್‌ಸಂಗ್‌ನ ಮುಂದಿನ ಫೋಲ್ಡಬಲ್ ಮೊಬೈಲ್‌ಗಳ ಜೊತೆಗೆ ಗ್ಯಾಲಕ್ಸಿ Z Fold 7 ಮತ್ತು ಗ್ಯಾಲಕ್ಸಿ Z Flip 7 ಅನ್ನು ಮುಂದಿನ ವರ್ಷದ ಮಧ್ಯದಲ್ಲಿ ತರಬಹುದು ಎಂದು ತೋರುತ್ತಿದೆ.
ಕೆಲವು ವಾರಗಳ ಹಿಂದೆ ಸ್ಯಾಮ್‌ಸಂಗ್ ತನ್ನ ಟಾಪ್-ಆಫ್-ಲೈನ್ Galaxy Z Fold 6 ವಿಶೇಷ ಆವೃತ್ತಿಯ ಮಾದರಿಯನ್ನು ಆಯ್ದ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿತ್ತು. ಆದರೆ ಇದು ಸ್ಟ್ಯಾಂಡರ್ಡ್ ವೇರಿಯಂಟ್‌ಗಿಂತ ಹೆಚ್ಚು ಬೆಲೆ ಹೊಂದಿದೆ. ದಕ್ಷಿಣ ಕೊರಿಯಾದ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ನೇವರ್‌ನ ಪೋಸ್ಟ್‌ನಲ್ಲಿ, ಈಗ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್‌ನ ಕೈಗೆಟುಕುವ ರೂಪಾಂತರವನ್ನು ಬಜೆಟ್ ಬೆಲೆಯಲ್ಲಿ ತರಲು ಯೋಜಿಸುತ್ತಿದೆ ಎಂದು ಉಲ್ಲೇಖಿಸಿದೆ.