Prasar Bharati Launches OTT Platform Waves:ಭಾರತ ಸರ್ಕಾರ ತನ್ನದೇ ಆದ ಒಟಿಟಿ ಪ್ಲಾಟ್‌ಫಾರ್ಮ್ ಹೊರತಂದಿದೆ. ಭಾರತೀಯ ಸಾರ್ವಜನಿಕ ಪ್ರಸಾರದ ದೈತ್ಯ ಪ್ರಸಾರ ಭಾರತಿ ಇದಕ್ಕೆ 'ವೇವ್ಸ್' ಎಂದು ಹೆಸರಿಟ್ಟಿದೆ.
ಪ್ರಸ್ತುತ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ ಜನರು ತಮ್ಮ ನೆಚ್ಚಿನ ಚಲನಚಿತ್ರಗಳು ಮತ್ತು ಹಾಸ್ಯ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾರೆ. ನೆಟ್‌ಫ್ಲಿಕ್ಸ್, ಅಮೆಜಾನ್‌ನಂತಹ ಹಲವು ಒಟಿಟಿಗಳಿವೆ. ಆದರೆ ಇವುಗಳಿಗೆ ಮಾಸಿಕ ಮತ್ತು ವಾರ್ಷಿಕ ಶುಲ್ಕವನ್ನು ಪಾವತಿಸುವ ಮೂಲಕ ಚಂದಾದಾರರಾಗಬೇಕಿದೆ. ಆದರೆ 'ವೇವ್ಸ್' ವೇದಿಕೆಯಲ್ಲಿ ಪ್ರಸಾರ ಭಾರತಿ ತನ್ನ ಬಳಕೆದಾರರಿಗೆ 'ರಾಮಾಯಣ' ಮತ್ತು 'ಮಹಾಭಾರತ' ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಪ್ರಸಾರ ಭಾರತಿ ತನ್ನ ಹೊಸ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ 'ವೇವ್ಸ್' ಅನ್ನು ಇತ್ತೀಚಿಗೆ ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಪ್ರಾರಂಭಿಸಿತು. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಚಾಲನೆ ನೀಡಿದ್ದರು.
ವೇವ್ಸ್‌ನಲ್ಲಿ ರಾಮಾಯಣ, ಮಹಾಭಾರತ, ರೇಡಿಯೋ ಕಾರ್ಯಕ್ರಮಗಳು, ಭಕ್ತಿಗೀತೆಗಳು, ಆಟಗಳು ಮತ್ತು ಇ-ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಸಾರ ಭಾರತಿ ಪ್ರಕಟಿಸಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ವೇವ್ಸ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಬಹುದು.
ಉದ್ದೇಶವೇನು?: ಭಾರತವನ್ನು ವಿಡಿಯೋ ಗೇಮಿಂಗ್ ಮತ್ತು ಮನರಂಜನೆಯ ತಾಣವನ್ನಾಗಿ ಮಾಡುವ ಉದ್ದೇಶದಿಂದ ಪ್ರಸಾರ ಭಾರತಿ ತನ್ನದೇ ಆದ ಒಟಿಟಿ ಪ್ಲಾಟ್‌ಫಾರ್ಮ್ ತಂದಿದೆ.
ಈ ಕುರಿತು ಗೋವಾದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಪ್ರಸಾರ ಭಾರತಿ ಅಧ್ಯಕ್ಷ ನವನೀತ್ ಕುಮಾರ್ ಸೆಹಗಲ್ ಮಾತನಾಡಿ, "ಕುಟುಂಬದ ಎಲ್ಲ ಸದಸ್ಯರೂ ಆನಂದಿಸಬಹುದಾದ ಕಾರ್ಯಕ್ರಮಗಳನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ" ಎಂದು ಮಾಹಿತಿ ನೀಡಿದರು.
ಪ್ರಸಾರ ಭಾರತಿ ಪ್ರಕಾರ, ಪ್ರಸ್ತುತ 65 ಲೈವ್ ಚಾನೆಲ್‌ಗಳು 'ವೇವ್ಸ್' OTTನಲ್ಲಿ ಲಭ್ಯವಿದೆ. ಇದು 12ಕ್ಕೂ ಹೆಚ್ಚು ಭಾಷೆಗಳಲ್ಲಿ 10ಕ್ಕೂ ಹೆಚ್ಚು ವಿಭಾಗಗಳಲ್ಲಿ ವೈವಿಧ್ಯಮಯ ವಿಷಯವನ್ನು ನೀಡುತ್ತದೆ. ಇವುಗಳಲ್ಲಿ ವಿಡಿಯೋ ಆನ್ ಡಿಮ್ಯಾಂಡ್ ಕಂಟೆಂಟ್, ಉಚಿತ ಗೇಮಿಂಗ್ ಮತ್ತು ರೇಡಿಯೋ ಸ್ಟ್ರೀಮಿಂಗ್ ಸೇರಿದೆ. ವೇವ್ಸ್ ಒಟಿಟಿ ಅನ್ನು ಇತರ ಸ್ಟ್ರೀಮಿಂಗ್ ಸೇವೆಗಳಿಂದ ಪ್ರತ್ಯೇಕಿಸಲು ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಸಹಾಯದಿಂದ ರಚಿಸಲಾಗಿದೆ. ಇದು ಹಳೆಯ ಸಿನಿಮಾಗಳು ಮತ್ತು ವಯಸ್ಕರಿಗೆ ಸುಮಧುರ ಹಾಡುಗಳನ್ನು ಹೊಂದಿದೆ. ಇವುಗಳೊಂದಿಗೆ ಮಕ್ಕಳ ಮನರಂಜನಾ ಕಾರ್ಯಕ್ರಮಗಳಾದ ಛೋಟಾ ಭೀಮ್, ಅಕ್ಬರ್ ಬೀರ್ಬಲ್, ತೆನಾಲಿರಾಮ್ ಮತ್ತು ಇತರ ಅನಿಮೇಟೆಡ್ ಚಲನಚಿತ್ರಗಳೂ ವೇವ್ಸ್‌ನಲ್ಲಿ ಸಿಗಲಿವೆ.
ಇದನ್ನೂ ಓದಿ:ಕೊನೆಗೂ ಪ್ರೀಮಿಯಂ ವಿಭಾಗಕ್ಕೆ ಬಂತು ಒಪ್ಪೋ: ಹೊಸ ಮಾಡೆಲ್ಗಳ ಬೆಲೆ, ವೈಶಿಷ್ಟ್ಯಗಳು