ನವದೆಹಲಿ:ದೇಶದ ಆಯ್ದ ಗೇಮರ್ಸ್ಗಳೊಂದಿಗೆ ಇಂದು ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು, ಹೊಸತನದ ಆವಿಷ್ಕಾರದಲ್ಲಿ ಹವಾಮಾನ ಬದಲಾವಣೆ, ಶುಚಿತ್ವದಂತಹ ಜಾಗತಿಕ ವಿಚಾರಗಳ ಕುರಿತು ಗೇಮ್ಗಳನ್ನು ರೂಪಿಸುವಂತೆ ಸಲಹೆ ನೀಡಿದರು.
ಭಾರತದ ಪ್ರಮುಖ ಗೇಮರ್ಸ್ಗಳಾದ ಅನಿಮೇಶ್ ಅಗರ್ವಾಲ್, ಮಿಥಿಲೇಶ್ ಪಾಟಂಕರ್, ಪಾಯಲ್ ಧರೆ, ನಮನ್ ಮಾಥುರ್ ಮತ್ತು ಅಂಶು ಬಿಶ್ತ್ ಅವರನ್ನು ಭೇಟಿಯಾಗಿ ಗೇಮಿಂಗ್ ಜಗತ್ತಿನ ಕುರಿತು ಮಾತನಾಡಿದ ಅವರು, ಪಾಶ್ಚಿಮಾತ್ಯ ಜಗತ್ತಿನ ಉತ್ಪಾದಕರಂತೆ ಶೂಟಿಂಗ್ ಗೇಮ್ಸ್ನ ಹೊರತಾಗಿ ನಮ್ಮ ಗೇಮರ್ಗಳು ನೈಜ ಜೀವನದ ವಿಷಯಗಳನ್ನಾಗಿ ಬದಲಾಯಿಸಬೇಕು ಎಂದು ಸಲಹೆ ನೀಡಿದರು.
ವಿಶ್ವದ ನಾಯಕರು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಮತ್ತು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅನೇಕ ಮಾದರಿಗಳ ಕುರಿತು ಮಾತನಾಡಿದ್ದು, ಈ ನಿಟ್ಟಿನಲ್ಲಿ ನಾವು ಸಾಗಬೇಕಿದೆ. 'ಮಿಷನ್ ಲೈಫ್: ಲೈಫ್ಸ್ಟೈಲ್ ಫಾರ್ ಎನ್ವರ್ನಾಮೆಂಟ್' ಎಂಬ ಪರ್ಯಾಯ ವಿಷಯವನ್ನು ರೂಪಿಸಿದ್ದೇನೆ ಎಂದು ಮೋದಿ ಹೇಳಿದರು.
ಜಗತ್ತಿನ ಪ್ರಮುಖ ಸಮಸ್ಯೆಗಳಾದ ಜಾಗತಿಕ ಹವಾಮಾನ ಬಿಕ್ಕಟ್ಟು ಪರಿಹರಿಸುವ ಗುರಿಯನ್ನು ಆಟಗಾರರು ಹೊಂದಿರಬೇಕು. ಅಲ್ಲದೇ ಅಲ್ಲಿ ಸಮರ್ಥನೀಯ ವಿಧಾನವನ್ನು ಗುರುತಿಸಿ, ಅದಕ್ಕೆ ಪರಿಹಾರವನ್ನು ಹುಡುಕಬೇಕು. ಜೊತೆಗೆ ಈ ಗೇಮ್ಗಳ ಮೂಲಕ ನಾವು ಯಾರನ್ನು ತಲುಪಬೇಕು ಎಂದು ತಿಳಿದು, ಇದಕ್ಕೆ ಉತ್ತಮ ವಿಧಾನಗಳ ಮೂಲಕ ಪರಿಹಾರ ನೀಡಬೇಕು ಎಂದರು.