Common Password: ದೇಶದ ಜನರಿಗೆ ನಾರ್ಡ್ಪಾಸ್ ಶಾಕಿಂಗ್ ಸುದ್ದಿ ನೀಡಿದೆ. ಇದು ವಾರ್ಷಿಕ ಟಾಪ್- 200 ಅತ್ಯಂತ ಸಾಮಾನ್ಯ ಪಾಸ್‌ವರ್ಡ್‌ಗಳ ಸಂಶೋಧನೆಯ ಆರನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಸಂಶೋಧನೆಯಲ್ಲಿ 44 ದೇಶಗಳಲ್ಲಿ ಹೆಚ್ಚು ಬಳಸಲಾದ ಪಾಸ್‌ವರ್ಡ್‌ಗಳ ಲಿಸ್ಟ್ ಮಾಡಲಾಗಿದೆ. ಭಾರತ ಸೇರಿದಂತೆ ವಿಶ್ವಾದ್ಯಂತ ಅತೀ ಹೆಚ್ಚು ‘123456’ ಎಂಬ ಸಂಖ್ಯೆಯ ಪಾಸ್‌ವರ್ಡ್‌ಗಳನ್ನು ಉಪಯೋಗಿಸಿದ್ದಾರೆ ಎಂದು ತಿಳಿಸಿದೆ.
ವಿಶ್ವದಾದ್ಯಂತ 30,18,050 ಬಳಕೆದಾರರಲ್ಲಿ 76,981 ಮಂದಿ ಭಾರತೀಯರು ಈ ಪಾಸ್‌ವರ್ಡ್ ಅನ್ನು ಉಪಯೋಗಿಸಿದ್ದಾರೆ. ಎರಡನೇ ಅತಿ ಹೆಚ್ಚು ಬಳಸಿದ ಪಾಸ್‌ವರ್ಡ್ '123456789' ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ. ಇದು ಭಾರತದಲ್ಲಿ ನಾಲ್ಕನೇ ಹೆಚ್ಚು ಬಳಸುವ ಪಾಸ್‌ವರ್ಡ್ ಆಗಿದೆ.
ನಾರ್ಡ್ಸ್ಟೆಲ್ಲರ್ ಸಹಭಾಗಿತ್ವದಲ್ಲಿ ನಡೆಸಿದ ಈ ಅಧ್ಯಯನವು ಪ್ರಪಂಚದ ಅರ್ಧದಷ್ಟು ಸಾಮಾನ್ಯ ಪಾಸ್‌ವರ್ಡ್‌ಗಳು "qwerty", "1q2w3e4er5t" ಮತ್ತು "123456789"ನಂತಹ ಕೆಲವು ಸುಲಭ ಅಂಕಿಸಂಖ್ಯೆಗಳಾಗಿವೆ. ಇಂಟರ್ನೆಟ್ ಬಳಕೆದಾರರು ವೈಯಕ್ತಿಕ ಖಾತೆಗಳಿಗಾಗಿ ಸರಾಸರಿ 168 ಪಾಸ್‌ವರ್ಡ್‌ಗಳನ್ನು ಮತ್ತು ಕೆಲಸಕ್ಕಾಗಿ 87 ಪಾಸ್‌ವರ್ಡ್‌ಗಳನ್ನು ಹೊಂದಿದ್ದಾರೆ. ಹಲವಾರು ಪಾಸ್‌ವರ್ಡ್‌ಗಳನ್ನು ನಿರ್ವಹಿಸುವುದು ಕಷ್ಟವಾದ ಕಾರಣ, ಹೆಚ್ಚಿನವರು ಸಾಮಾನ್ಯವಾಗಿ ಬಳಸುವ ಅಂಕಿಸಂಖ್ಯೆಗಳನ್ನು ಪಾಸ್‌ವರ್ಡ್ ಆಗಿ ನಮೂದಿಸಿದ್ದಾರೆ ಎಂದು ತೋರುತ್ತದೆ. ಇದು ನೆನಪಿಡಲು ಸುಲಭವಾಗಿರಬಹುದು, ಆದರೆ ಭೇದಿಸಲೂ ಸಹ ಅಷ್ಟೇ ಸುಲಭ ಎಂಬುದು ಗಮನಾರ್ಹ ಸಂಗತಿ.
ಇಂಟರ್ನೆಟ್ ಬಳಕೆದಾರರಿಗೆ ಇಂತಹ ಸುಲಭ ಪಾಸ್‌ವರ್ಡ್‌ಗಳನ್ನು ಬಳಸದಂತೆ ತಜ್ಞರು ಎಚ್ಚರಿಸುತ್ತಿದ್ದಾರೆ. ಏಕೆಂದರೆ ಇಂತಹ ಪಾಸ್‌ವರ್ಡ್‌ಗಳನ್ನು ಟ್ರ್ಯಾಕ್ ಮಾಡಲು ಕೆಲವೇ ಸೆಕೆಂಡ್ ಸಾಕಂತೆ. ಆದರೆ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಇನ್ನೂ "qwerty123" ನಂತಹ ಸಾಮಾನ್ಯ ಪಾಸ್ವರ್ಡ್ಗಳನ್ನೇ ಬಳಸುತ್ತಿರುವುದು ಅಧ್ಯಯನದ ಮೂಲಕ ತಿಳಿದು ಬಂದಿದೆ.
ಇದಲ್ಲದೆ ಪಾಸ್‌ವರ್ಡ್ ಎಂಬ ಪದವೂ ಸಾಮಾನ್ಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಪದ ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್ ಪಟ್ಟಿಯಲ್ಲಿ ತನ್ನ ಸ್ಥಾನ ಕಂಡುಕೊಂಡಿದೆ. ಆದರೆ ಈ ಸಮಯದಲ್ಲಿ ಇದು ಭಾರತದಲ್ಲಿ ಹೆಚ್ಚು ಬಳಸಿದ ಎರಡನೇ ಪಾಸ್‌ವರ್ಡ್ ಆಗಿರುವುದು ಗಮನಾರ್ಹ. ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ವಾಸಿಸುವ ಜನರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಭಾರತದಲ್ಲಿ ಪಾಸ್‌ವರ್ಡ್‌ಗಳ ಬಹಳ ಸರಳತೆ ಮತ್ತು ದೇಶದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಎಂದು ಅಧ್ಯಯನ ಹೇಳಿದೆ. ಅಂದ್ರೆ India123, Indya123 ಅಂತಹ ಸುಲಭ ಪಾಸ್‌ವರ್ಡ್‌ಗಳನ್ನು ಬಳಸುವುದು ತಿಳಿದು ಬಂದಿದೆ. ಇತರರ ಮೆಚ್ಚಿನ ಪಾಸ್ವರ್ಡ್ಗಳೆಂದ್ರೆ admin ಮತ್ತು abcd1234 ಪದಗಳೂ ಸಹ ಸೇರಿವೆ. ಇದು ಸುಲಭವಾದ ಮಾದರಿಗಳನ್ನು ಬಳಸುವ ಹಿಂದಿನ ವರ್ಷದ ಪ್ರವೃತ್ತಿಯನ್ನು ಹೋಲುತ್ತದೆ.
ನಾರ್ಡ್ಪಾಸ್ ನಡೆಸಿದ ಅಧ್ಯಯನದ ಪ್ರಕಾರ, ಪ್ರಪಂಚದ ಅತ್ಯಂತ ಸಾಮಾನ್ಯವಾದ ಪಾಸ್‌ವರ್ಡ್‌ಗಳಲ್ಲಿ ಸುಮಾರು ಶೇ 78ರಷ್ಟನ್ನು ಒಂದು ಸೆಕೆಂಡಿಗಿಂತ ಕಡಿಮೆ ಅವಧಿಯಲ್ಲಿ ಟ್ರ್ಯಾಕ್ ಮಾಡಬಹುದಂತೆ. ಕಳೆದ ವರ್ಷದಂತೆ ಈ ವರ್ಷವೂ ಪಾಸ್‌ವರ್ಡ್ ಸುರಕ್ಷತೆಯ ಪರಿಸ್ಥಿತಿಯು ಸ್ವಲ್ಪ ಹದಗೆಟ್ಟಿದೆ ಎಂದು ಅಧ್ಯಯನ ಸೂಚಿಸುತ್ತದೆ. ಕಳೆದ ವರ್ಷ ಇಂತಹ ಪಾಸ್‌ವರ್ಡ್‌ಗಳ ಶೇಕಡಾ 70 ರಷ್ಟಿತ್ತು. ವ್ಯಕ್ತಿಗಳು ಮತ್ತು ವ್ಯಾಪಾರ ಪ್ರತಿನಿಧಿಗಳು ಬಳಸುವ ಸಾಮಾನ್ಯ ಪಾಸ್‌ವರ್ಡ್‌ಗಳಲ್ಲಿ ಸುಮಾರು 40 ಪ್ರತಿಶತ ಒಂದೇ ಆಗಿವೆ ಎಂದು ಸಂಶೋಧನೆ ಮೂಲಕ ತಿಳಿದುಬಂದಿದೆ.
ಉದ್ಯೋಗಿಗಳ ವರ್ಕ್ ಅಕೌಂಟ್ಗಳನ್ನು ಪ್ರವೇಶಿಸಲು ಹ್ಯಾಕರ್‌ಗಳು ಯಶಸ್ವಿಯಾಗಲು ಮತ್ತೊಂದು ಕಾರಣವೆಂದರೆ ಅನೇಕರು ವೈಯಕ್ತಿಕ ಮತ್ತು ವರ್ಕ್ ಅಕೌಂಟ್ಗಳಿಗೆ ಒಂದೇ ಪಾಸ್‌ವರ್ಡ್ ಅನ್ನು ಬಳಸುತ್ತಾರೆ. ಹೀಗಾಗಿ ನಿಮ್ಮ ಅಕೌಂಟ್ ಪಾಸ್‌ವರ್ಡ್‌ಗಳು ಸ್ಟ್ರಾಂಗ್ ಆಗಿರಬೇಕು. ಸುಮಾರು 20 ಅಕ್ಷರಗಳು ಒಳಗೊಂಡಿರಬೇಕು. ಅದರಲ್ಲಿ ವಿಶೇಷ ಚಿಹ್ನೆಗಳು ಸಹ ಹೊಂದಿರಬೇಕು. ಇಂತಹ ಪಾಸ್‌ವರ್ಡ್‌ಗಳನ್ನು ಹ್ಯಾಕರ್‌ಗಳು ಟ್ರ್ಯಾಕ್ ಮಾಡಲು ಕಷ್ಟ ಸಾಧ್ಯವಾಗುತ್ತದೆ.
ಇದನ್ನೂ ಓದಿ:ವೈರಸ್ಗೆ ಠಕ್ಕರ್ ಕೊಡಲು ಹೊಸ ಫೀಚರ್ ಸಿದ್ಧಪಡಿಸಿದ ಗೂಗಲ್: ಇದು ಗೌಪ್ಯತೆ ವಿಷಯದಲ್ಲಿ ಮಹಾ ಕಿಲಾಡಿ