Ola Electric:ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಓಲಾ ಎಲೆಕ್ಟ್ರಿಕ್ ಪ್ರಮುಖ ನಿರ್ಧಾರದ ಬಗ್ಗೆ ಘೋಷಣೆ ಮಾಡಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಸಂಬಂಧಿಸಿದ ಸೇವೆಗಳ ಕುರಿತು ಗ್ರಾಹಕರಿಂದ ತೀವ್ರ ಟೀಕೆಗಳನ್ನು ಎದುರಿಸುತ್ತಿರುವಾಗ, ಮುಂದಿನ ಎರಡು ವರ್ಷಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ.
ಈ ಕಂಪನಿಗೆ ಸೇರಿದ ಸ್ಕೂಟರ್‌ಗಳು ಬ್ಯಾಟರಿ ಸಮಸ್ಯೆ, ಏಕಾಏಕಿ ಸ್ಥಗಿತಗೊಂಡಿರುವುದು ಮುಂತಾದ ಸಮಸ್ಯೆಗಳಿಂದ ಓಲಾ ಶೋರೂಂಗಳ ಮುಂದೆ ಹಲವು ಗ್ರಾಹಕರು ಸಾಲುಗಟ್ಟಿ ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಗೊತ್ತೇ ಇದೆ. ಈ ಹಿನ್ನೆಲೆ ಒಂದೆಡೆ ಹೊಸ ಸೇವಾ ಕೇಂದ್ರಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತಲೇ ಇನ್ನಷ್ಟು ಹೊಸ ಉತ್ಪನ್ನಗಳನ್ನು ತರುವತ್ತ ಗಮನ ಹರಿಸಿದೆ.
ಮುಂದಿನ ಎರಡು ವರ್ಷಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ವಿಭಾಗದಲ್ಲಿ 20 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದು ಓಲಾ ಇತ್ತೀಚೆಗೆ ಘೋಷಿಸಿತು. ಇನ್ನು ಮುಂದೆ ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಸ್ಕೂಟರ್‌ಗಳಿಗೆ ಸಂಬಂಧಿಸಿದಂತೆ ಓಲಾ ಗ್ರಾಹಕರಿಗೆ ಸರಿಯಾದ ಸೇವೆಗಳನ್ನು ಒದಗಿಸಿಲ್ಲ ಎಂದು ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಇತ್ತೀಚೆಗೆ ಆರೋಪಿಸಿದ್ದರು. ಇದರ ಪರಿಣಾಮವಾಗಿ ಕಂಪನಿಯ ಸಿಇಒ ಭವೇಶ್ ಅಗರ್ವಾಲ್ ಮತ್ತು ಕುನಾಲ್ ಕಮ್ರಾ ನಡುವೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸಣ್ಣ ಕದನ ನಡೆಯಿತು. ಇದರಿಂದ ಓಲಾ ಎಲೆಕ್ಟ್ರಿಕ್ ಷೇರುಗಳೂ ಕುಸಿದವು. ಈ ವಿವಾದದ ನಂತರ, ಕಂಪನಿಯು ನಷ್ಟವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಂಡಿತು. ಓಲಾ ತನ್ನ ಶೋರೂಂಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ ಹೊಸ EV ಉತ್ಪನ್ನಗಳ ಬಗ್ಗೆ ಈ ಘೋಷಣೆ ಮಾಡಿದೆ.
ಕುನಾಲ್ ಕಮ್ರಾ-ಭವೇಶ್ ಅಗರ್ವಾಲ್ ವಾಗ್ವಾದ:ಮೂಲತಃ ಓಲಾ ಎಲೆಕ್ಟ್ರಿಕ್‌ನಲ್ಲಿ ಸಾಕಷ್ಟು ಸೇವಾ ಕೇಂದ್ರಗಳಿಲ್ಲ ಮತ್ತು ಇದರಿಂದ ಗ್ರಾಹಕರು ಬೇಸರಗೊಂಡಿದ್ದಾರೆ ಎಂದು ಕಾಮಿಡಿಯನ್ ಕುನಾಲ್ ಎಕ್ಸ್ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿಯ ಸಿಇಒ ಭವೇಶ್ ಅಗರ್ವಾಲ್, 'ನಿಮ್ಮ ಕಾಮಿಡಿ ಕೆರಿಯರ್ ಮುಗಿದ ನಂತರವೇ ಇಂತಹ ಪೇಯ್ಡ್ ಪೋಸ್ಟ್‌ಗಳನ್ನು ಹಾಕುತ್ತಿದ್ದೀರಿ' ಎಂದಿದ್ದರು. ಓಲಾ ಸರ್ವೀಸ್ ಸೆಂಟರ್ನಲ್ಲಿ ಕೆಲಸ ಮಾಡಿದರೆ ಕಾಮಿಡಿ ಶೋಗಳಿಗಿಂತ ಹೆಚ್ಚು ಹಣ ನೀಡುವುದಾಗಿ ಭವೇಶ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕುನಾಲ್ ಕಮ್ರಾ, 'ಅತೃಪ್ತ ಗ್ರಾಹಕರಿಗೆ ಸಂಪೂರ್ಣ ಮರುಪಾವತಿಯನ್ನು ನೀಡಬಹುದೇ?' ಎಂದು ಸವಾಲು ಹಾಕಿದ್ದರು. ಹೀಗೆ ಅವರ ಚರ್ಚೆ ವಿವಾದಕ್ಕೆ ತಿರುಗಿತ್ತು.
ಓದಿ:ಎಲೆಕ್ಟ್ರಿಕ್ ಬೈಕ್ಗಳಲ್ಲಿ ದೋಷ: ಹಾಸ್ಯನಟ ಕುನಾಲ್ ಕಮ್ರಾ, ಓಲಾ ಸಿಇಒ ಮಧ್ಯೆ ಮಾತಿನ ಯುದ್ಧ - Ola EVS error