ನವದೆಹಲಿ: ಡಿಜಿಟಲ್ ಜಗತ್ತು ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಿದಂತೆ ದೇಶದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂದರೆ ಜನವರಿಯಿಂದ ಮಾರ್ಚ್ ಅವಧಿಯವರೆಗೆ ದೇಶದ ನಾಲ್ವರಲ್ಲಿ ಒಬ್ಬರು ಹ್ಯಾಕಿಂಗ್ ದಾಳಿಗೆ ತುತ್ತಾಗುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಜೊತೆಗೆ ಈ ದಾಳಿಯಲ್ಲಿ ಮಾಲ್‌ವೇರ್ ಪ್ರಮುಖ ಸೈಬರ್ ಬೆದರಿಕೆಯಾಗಿ ಮುಂದುವರೆದಿದೆ.
ಜಾಗತಿಕ ಭದ್ರತಾ ಕಂಪನಿಯಾಗಿರುವ ಕ್ಯಾಸ್ಪರ್ಸ್ಕಿ ಈ ಕುರಿತು ದತ್ತಾಂಶ ಬಿಡುಗಡೆ ಮಾಡಿದ್ದು, ದೇಶದಲ್ಲಿ 22.9ರಷ್ಟು ವೆಬ್ ಬಳಕೆದಾರರು ವೆಬ್ ಆಧಾರಿತ ಬೆದರಿಕೆಯ ದಾಳಿಗೆ ಒಳಗಾಗುತ್ತಿದ್ದಾರೆ. ಸುಮಾರು ಶೇ 20.1ರಷ್ಟು ಬಳಕೆದಾರರು ಸ್ಥಳೀಯ ಬೆದರಿಕೆಗಳಿಗೆ ಗುರಿಯಾಗುತ್ತಿದ್ದಾರೆ.
ಭಾರತದಲ್ಲಿನ ವೆಬ್ ಬಳಕೆದಾರರಿಗೆ ಮಾಲ್‌ವೇರ್ ಪ್ರಮುಖ ಬೆದರಿಕೆಯಾಗಿದೆ. ಉದ್ದೇಶಿತ ಮಾಲ್‌ವೇರ್ ದಾಳಿಗಳು ಸಂಸ್ಥೆಗಳು ಮತ್ತು ಬಳಕೆದಾರರಿಗೆ ಇದು ಪ್ರಮುಖ ಚಿಂತೆಯೂ ಆಗಿದೆ ಎಂದು ವರದಿಯಾಗಿದೆ.
ಸೈಬರ್ ಅಪರಾಧಿಗಳು ಬ್ರೌಸರ್‌ಗಳು ಮತ್ತು ಅವುಗಳ ಪ್ಲಗಿನ್‌ಗಳಲ್ಲಿನ ದೋಷಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಫೈಲ್ ಲೆಸ್ ಮಾಲ್ವೇರ್ಗಳು ಅತ್ಯಂತ ಅಪಾಯಕಾರಿ ವೆಬ್ ಬೆದರಿಕೆಯಾಗಿವೆ. ಈ ದಾಳಿಯ ವಿಶ್ಲೇಷಣೆಗೆ ಯಾವುದೇ ಕುರುಹುಗಳನ್ನು ಬಿಡುವುದಿಲ್ಲ ಎಂದು ಅಧ್ಯಯನದ ಫಲಿತಾಂಶ ತಿಳಿಸಿದೆ.