ಸ್ಯಾನ್ ಫ್ರಾನ್ಸಿಸ್ಕೋ: ಆರ್ಟೆಮಿಸ್ ಗಗನಯಾತ್ರಿಗಳು ಚಂದ್ರನ ಮೇಲೆ ಪ್ರಯಾಣಿಸಲು ಬಳಸುವ ಲೂನಾರ್ ಟೆರೇನ್ ವೆಹಿಕಲ್ (ಎಲ್ಟಿವಿ) (lunar terrain vehicle -LTV) ಅನ್ನು ತಯಾರಿಸಲು ನಾಸಾ ಮೂರು ಕಂಪನಿಗಳನ್ನು ಆಯ್ಕೆ ಮಾಡಿದೆ. ಇಂಟ್ಯೂಟಿವ್ ಮಶೀನ್ಸ್, ಲೂನಾರ್ ಔಟ್ಪೋಸ್ಟ್ ಮತ್ತು ವೆಂಚೂರಿ ಆಸ್ಟ್ರೋಲ್ಯಾಬ್ ಈ ಮೂರು ಕಂಪನಿಗಳು ಈಗ ಆರ್ಟೆಮಿಸ್ ಗಗನಯಾತ್ರಿಗಳಿಗಾಗಿ ಎಲ್ಟಿವಿಯನ್ನು ತಯಾರಿಸಲಿವೆ.
ಆರ್ಟೆಮಿಸ್ ಅಭಿಯಾನದ ನಿಮಿತ್ತ ಚಂದ್ರನ ಮೇಲೆ ವೈಜ್ಞಾನಿಕ ಸಂಶೋಧನೆ ನಡೆಸಲು ಮತ್ತು ಮಂಗಳ ಗ್ರಹಕ್ಕೆ ಮಾನವ ಕಾರ್ಯಾಚರಣೆಗಳಿಗೆ ತಯಾರಿ ನಡೆಸಲು ಈ ವಾಹನವು ಸಹಾಯ ಮಾಡುತ್ತದೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ.
"ನಾವು ಚಂದ್ರನ ಮೇಲೆ ಅಧ್ಯಯನ ನಡೆಸಲು ಆರ್ಟೆಮಿಸ್ ಪೀಳಿಗೆಯ ಚಂದ್ರ ಪರಿಶೋಧನಾ ವಾಹನದ ತಯಾರಿಕೆ ಎದುರು ನೋಡುತ್ತಿದ್ದೇವೆ. ಗಗನಯಾತ್ರಿಗಳು ಚಂದ್ರನ ಮೇಲ್ಮೈಯಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸುವ ಅವರ ಸಾಮರ್ಥ್ಯವನ್ನು ಈ ವಾಹನವು ಬಹಳವಾಗಿ ಹೆಚ್ಚಿಸುತ್ತದೆ. ಹಾಗೆಯೇ ಸಿಬ್ಬಂದಿ ಕಾರ್ಯಾಚರಣೆಗಳ ನಡುವೆ ಇದು ವೈಜ್ಞಾನಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಹೂಸ್ಟನ್ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕಿ ವನೆಸ್ಸಾ ವೈಚ್ ಹೇಳಿದರು.
"ನಾವು ಕಾಲ್ನಡಿಗೆ ಮೂಲಕ ತಲುಪಲು ಸಾಧ್ಯವಾಗದ ಸ್ಥಳಗಳಿಗೆ ಪ್ರಯಾಣಿಸಲು ಎಲ್ಟಿವಿಯನ್ನು ಬಳಸಲಿದ್ದೇವೆ. ಇದು ಹೊಸ ವೈಜ್ಞಾನಿಕ ಆವಿಷ್ಕಾರಗಳನ್ನು ಅನ್ವೇಷಿಸುವ ಮತ್ತು ಸಂಶೋಧನೆ ಮಾಡುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ" ಎಂದು ವಾಷಿಂಗ್ಟನ್ನಲ್ಲಿರುವ ನಾಸಾ ಪ್ರಧಾನ ಕಚೇರಿಯ ಮುಖ್ಯ ಪರಿಶೋಧನಾ ವಿಜ್ಞಾನಿ ಜಾಕೋಬ್ ಬ್ಲೀಚರ್ ಹೇಳಿದರು.