ಸ್ಯಾನ್ ಫ್ರಾನ್ಸಿಸ್ಕೋ: ಚಾಟ್ ಜಿಪಿಟಿ ನಿರ್ಮಿಸುವ ಉದ್ದೇಶದಿಂದ ಸ್ಥಾಪನೆಯಾದ ಓಪನ್ ಎಐ ಕಂಪನಿ ವಿಫಲಾಗುತ್ತದೆ ಎಂದು ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರು ಭಾವಿಸಿದ್ದರು ಮತ್ತು ಅದೇ ಕಾರಣದಿಂದ ಅವರು ಕಂಪನಿಯಿಂದ ದೂರ ಸರಿದರು ಎಂದು ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್ ಮ್ಯಾನ್ ಹೇಳಿದ್ದಾರೆ.
ಪಾಡ್ ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಆಲ್ಟ್ ಮ್ಯಾನ್, "ಓಪನ್ಎಐ ವಿಫಲವಾಗಲಿದೆ ಎಂದು ಮಸ್ಕ್ ಭಾವಿಸಿದ್ದರು. ಕಂಪನಿಯ ಮೇಲೆ ಅವರು ಸಂಪೂರ್ಣ ನಿಯಂತ್ರಣ ಸಾಧಿಸಲು ಬಯಸಿದ್ದರು. ಪ್ರಸ್ತುತ ಯಶಸ್ವಿ ಕಂಪನಿಯಾಗಿರುವ ಓಪನ್ ಎಐ ಅನ್ನು ಅದೇ ದಿಕ್ಕಿನಲ್ಲಿ ಮುಂದುವರಿಸಲು ನಾವು ಬಯಸಿದ್ದೇವೆ" ಎಂದು ಹೇಳಿದರು.
"ವಿವಿಧ ಸಮಯಗಳಲ್ಲಿ ಅವರು ಓಪನ್ಎಐ ಅನ್ನು ಲಾಭರಹಿತ ಕಂಪನಿಯನ್ನಾಗಿ ಮಾಡಲು ಬಯಸಿದ್ದರು. ಅಲ್ಲದೆ ಅದರ ಮೇಲೆ ಅವರು ಸಂಪೂರ್ಣ ನಿಯಂತ್ರಣ ಸಾಧಿಸುವ ಅಥವಾ ಟೆಸ್ಲಾದೊಂದಿಗೆ ಅದನ್ನು ವಿಲೀನಗೊಳಿಸುವ ಅಧಿಕಾರ ಹೊಂದಲು ಬಯಸಿದ್ದರು. ಆದರೆ ಅದಕ್ಕೆ ನಾವು ಒಪ್ಪಲಿಲ್ಲವಾದ್ದರಿಂದ ಅವರು ಕಂಪನಿಯಿಂದ ದೂರವಾಗಲು ಬಯಸಿದರು. ಆಗಿದ್ದೆಲ್ಲ ಒಳ್ಳೆಯದೇ ಆಯಿತು" ಎಂದು ಅವರು ನುಡಿದರು.
ಸಾರ್ವಜನಿಕ ಹಿತದೃಷ್ಟಿಯಿಂದ ಶಕ್ತಿಶಾಲಿ ತಂತ್ರಜ್ಞಾನವನ್ನು ಉಚಿತವಾಗಿ ಜನರಿಗೆ ನೀಡುತ್ತಿರುವುದರಿಂದ ಕಂಪನಿಯು ತನ್ನ ಮೂಲ ಉದ್ದೇಶಕ್ಕೆ ಇನ್ನೂ ಬದ್ಧವಾಗಿದೆ ಎಂದು ಸಿಇಒ ಆಲ್ಟ್ ಮ್ಯಾನ್ ಹೇಳಿದರು.