ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಾಣಿಜ್ಯ ಅಂಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್)ನೊಂದಿಗೆ ಆಸ್ಟ್ರೇಲಿಯಾ ಸರ್ಕಾರ ಬುಧವಾರ 18 ಮಿಲಿಯನ್ ಡಾಲರ್ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತೀಯ ಬಾಹ್ಯಾಕಾಶ ಕಾಂಗ್ರೆಸ್ 2024ರ ಉದ್ಘಾಟನಾ ದಿನದಂದು ಈ ಒಪ್ಪಂದವನ್ನು ಘೋಷಿಸಲಾಗಿದೆ.
ಒಪ್ಪಂದದ ಪ್ರಕಾರ, ಆಸ್ಟ್ರೇಲಿಯಾದ ಸಂಸ್ಥೆಯಾಗಿರುವ ಸ್ಪೇಸ್ ಮೆಷಿನ್ಸ್ 2026ರಲ್ಲಿ ಇಸ್ರೋದ ಸಣ್ಣ ಉಪಗ್ರಹ ಉಡಾವಣಾ ವಾಹನದ (ಎಸ್ಎಸ್ಎಲ್‌ವಿ) ಮೂಲಕ ಉಪಗ್ರಹ ತಪಾಸಣೆ ಮತ್ತು ವೀಕ್ಷಣಾ ಪೇಲೋಡ್ಗಳನ್ನು ಉಡಾವಣೆ ಮಾಡಲಿದೆ.
"ಸ್ಪೇಸ್ ಮೆಷಿನ್ಸ್ ಮತ್ತು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ನಡುವೆ ಇಂದು ಉಡಾವಣಾ ಒಪ್ಪಂದ ಏರ್ಪಟ್ಟಿರುವುದು ಐತಿಹಾಸಿಕವಾಗಿದೆ. ಆಸ್ಟ್ರೇಲಿಯಾ ಮತ್ತು ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖ ಕಾರ್ಯತಂತ್ರ ಮತ್ತು ಸಹಜ ಪಾಲುದಾರ ದೇಶಗಳಾಗಿವೆ." ಎಂದು ಭಾರತದಲ್ಲಿನ ಆಸ್ಟ್ರೇಲಿಯಾದ ಹೈಕಮಿಷನರ್ ಫಿಲಿಪ್ ಗ್ರೀನ್ ಒಎಎಂ ಹೇಳಿದರು.
ಸ್ಪೇಸ್ ಮೈತ್ರಿ (ಮಿಷನ್ ಫಾರ್ ಆಸ್ಟ್ರೇಲಿಯಾ-ಇಂಡಿಯಾಸ್ ಟೆಕ್ನಾಲಜಿ, ರಿಸರ್ಚ್ ಆ್ಯಂಡ್ ಇನ್ನೋವೇಶನ್) ಎಂದು ಹೆಸರಿಸಲಾದ ಈ ಮಿಷನ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಇದು ಎರಡೂ ದೇಶಗಳ ವಾಣಿಜ್ಯ, ಸಾಂಸ್ಥಿಕ ಮತ್ತು ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳ ನಡುವೆ ನಿಕಟ ಸಂಬಂಧ ಬೆಸೆಯುವ ಉದ್ದೇಶ ಹೊಂದಿದೆ.
"ನಮ್ಮ ನವೀನ ಬಾಹ್ಯಾಕಾಶ ನೌಕೆ ಸಾಮರ್ಥ್ಯಗಳನ್ನು ಭಾರತದ ಉಡಾವಣಾ ಪರಿಣತಿಯೊಂದಿಗೆ ಸಂಯೋಜಿಸುವ ಮೂಲಕ, ನಮ್ಮ ರಾಷ್ಟ್ರಗಳ ನಡುವಿನ ಬಾಹ್ಯಾಕಾಶ ಸಂಬಂಧಗಳನ್ನು ಬಲಪಡಿಸುವುದಲ್ಲದೆ, ಸುಸ್ಥಿರ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ನಮ್ಮ ಸಮಾನರೂಪದ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದೇವೆ" ಎಂದು ಸ್ಪೇಸ್ ಮೆಷಿನ್ಸ್ ಕಂಪನಿಯ ಸಿಇಒ ಮತ್ತು ಸಹ-ಸಂಸ್ಥಾಪಕ ರಜತ್ ಕುಲಶ್ರೇಷ್ಠ ಹೇಳಿದರು.
ಈ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾದ ಬಾಹ್ಯಾಕಾಶ ಏಜೆನ್ಸಿಯ ಮುಖ್ಯಸ್ಥ ಎನ್ರಿಕೊ ಪಲೆರ್ಮೊ, ಈ ಒಪ್ಪಂದವು ಆಸ್ಟ್ರೇಲಿಯಾದ ಬಾಹ್ಯಾಕಾಶ ಪರಂಪರೆಯನ್ನು ಹೆಚ್ಚಿಸುವ ಮತ್ತು ಭಾರತದೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.
"ಭಾರತದಂತೆಯೇ ಆಸ್ಟ್ರೇಲಿಯಾದ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ ಮತ್ತು ನಾವು ಭೂಮಿಯ ಮೇಲಿನ ಜೀವನಕ್ಕೆ ಪ್ರಯೋಜನವಾಗುವ ನವೀನ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಉತ್ಪಾದಿಸುತ್ತಿದ್ದೇವೆ. ಈ ಮಿಷನ್ ಭವಿಷ್ಯದ ಅನ್ವೇಷಕರಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಈ ನಿರ್ಣಾಯಕ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಮತ್ತಷ್ಟು ಹೆಚ್ಚಿಸುತ್ತದೆ" ಎಂದು ಅವರು ನುಡಿದರು.
ಸ್ಪೇಸ್ ಮೈತ್ರಿ ಮಿಷನ್ ಅಡಿಯಲ್ಲಿ ಅನಂತ್ ಟೆಕ್ನಾಲಜೀಸ್, ದಿಗಂತಾರಾ, ಅಡಿಲೇಡ್ ವಿಶ್ವವಿದ್ಯಾಲಯ, ಸಿಡ್ನಿ ವಿಶ್ವವಿದ್ಯಾಲಯ, ಸಿಡ್ನಿ ತಂತ್ರಜ್ಞಾನ ವಿಶ್ವವಿದ್ಯಾಲಯ, ಲಿಯೋಲ್ಯಾಬ್ಸ್, ಅಡ್ವಾನ್ಸ್ಡ್ ನ್ಯಾವಿಗೇಷನ್ ಮತ್ತು ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್ ಸ್ಟಿಟ್ಯೂಟ್ (ಎಎಸ್ಪಿಐ) ಸೇರಿದಂತೆ ಹಲವಾರು ಆಸ್ಟ್ರೇಲಿಯಾದ ಮತ್ತು ಭಾರತೀಯ ಪಾಲುದಾರ ಕಂಪನಿಗಳು ಸ್ಪೇಸ್ ಮೆಷಿನ್ಸ್ ಕಂಪನಿಯೊಂದಿಗೆ ಕೈಜೋಡಿಸಿವೆ.
ಇದನ್ನೂ ಓದಿ: ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗಳಲ್ಲಿ 'ಮೆಟಾ ಎಐ' ಅಸಿಸ್ಟಂಟ್ : ಏನಿದರ ವಿಶೇಷ? - Meta AI