OpenAI CEO Sam Altman:ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರನ್ನು ಭೇಟಿಯಾಗಿದ್ದಾರೆ. ಜಿಪಿಯುಸ್, ಮಾಡೆಲ್ಸ್ ಮತ್ತು ಅಪ್ಲಿಕೇಶನ್ಸ್ ಸಂಪೂರ್ಣ ಎಐ ಸ್ಟ್ಯಾಕ್ ಅನ್ನು ನಿರ್ಮಿಸುವ ಭಾರತದ ಕಾರ್ಯತಂತ್ರದ ಬಗ್ಗೆ ಅವರು ಸ್ಯಾಮ್ ಆಲ್ಟ್‌ಮನ್ ಅವರೊಂದಿಗೆ ವಿವರವಾಗಿ ಚರ್ಚಿಸಿದರು. ಈ ಸಭೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆಲ್ಟ್‌ಮನ್ ಭಾರತದೊಂದಿಗೆ ಸಹಕರಿಸಲು ಸಿದ್ಧರಿರುವುದು ಸಂತೋಷದ ವಿಷಯ ಎಂದು ಬರೆದುಕೊಂಡಿದ್ದಾರೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಧ್ಯೇಯ ಮತ್ತು ದೃಷ್ಟಿಕೋನವನ್ನು ಓಪನ್‌ಎಐ ಸಿಇಒ ಶ್ಲಾಘಿಸಿದ್ದಾರೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಆಲ್ಟ್‌ಮನ್ ಅವರೊಂದಿಗಿನ ಭೇಟಿಯ ಸಮಯದಲ್ಲಿ, ಅಶ್ವಿನಿ ವೈಷ್ಣವ್ ಚಂದ್ರಯಾನ 3 ಮಿಷನ್ ಅನ್ನು ಉಲ್ಲೇಖಿಸಿದರು ಮತ್ತು ಭಾರತವು ಇತರ ಹಲವು ದೇಶಗಳಿಗಿಂತ ಕಡಿಮೆ ವೆಚ್ಚದಲ್ಲಿ ಚಂದ್ರನತ್ತ ಮಿಷನ್ ಕಳುಹಿಸಿದ್ದು ಹೇಗೆ ಎಂಬುದನ್ನು ವಿವರಿಸಿದರು.
ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ, ಹವಾಮಾನ ಮುನ್ಸೂಚನೆ, ವಿಪತ್ತು ನಿರ್ವಹಣೆ, ಸಾರಿಗೆ ಮತ್ತು ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸಲು ದೇಶಕ್ಕೆ ಪ್ರಯೋಜನಕಾರಿಯಾದ ವಿಶಿಷ್ಟ ಎಐ ಟೂಲ್ಗಳನ್ನು ರೂಪಿಸಲು ಅವರು, "ಇಡೀ ನವೋದ್ಯಮ ಸಮುದಾಯ"ವನ್ನು ಉದ್ದೇಶಿಸಿ ಮಾತನಾಡಿದರು. ಎಐ ಟೂಲ್ಗಳನ್ನು ಅಭಿವೃದ್ಧಿಪಡಿಸಲು ಮುಂಬರುವ ಮುಕ್ತ ಸ್ಪರ್ಧೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
ಇದಕ್ಕೂ ಮೊದಲು, ಆಲ್ಟ್‌ಮನ್ ಭಾರತವನ್ನು ಎಐಗೆ ಬಹಳ ಮುಖ್ಯವಾದ ಮಾರುಕಟ್ಟೆ ಮತ್ತು ಜಾಗತಿಕವಾಗಿ ಕಂಪನಿಯ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂದು ಕರೆದರು. ಎಐ ಮಾದರಿಗಳು ಇನ್ನೂ ಅಗ್ಗವಾಗಿಲ್ಲ, ಆದರೆ ಅವು ಕಾರ್ಯಸಾಧ್ಯವಾಗಿವೆ. ಭಾರತವು ಅಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಅವರು ಸಭೆಗೆ ತಿಳಿಸಿದರು. ದೇಶವು ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಂಡಿತು ಮತ್ತು ಅದರ ಸುತ್ತಲೂ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಹೇಗೆ ನಿರ್ಮಿಸಿತು ಎಂಬುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.
ಜಾಗತಿಕವಾಗಿ ಎಐ ಸ್ಪರ್ಧೆ ಬಿಸಿಯಾಗುತ್ತಿದ್ದಂತೆ ಭಾರತವೂ ತನ್ನ ಹೆಜ್ಜೆಯನ್ನು ಮುಂದಿಡುತ್ತಿದೆ. ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶಿಕ್ಷಣಕ್ಕಾಗಿ ಎಐಯಲ್ಲಿ ಹೊಸ ಶ್ರೇಷ್ಠತಾ ಕೇಂದ್ರ (CoEs) ರಚನೆಯನ್ನು ಘೋಷಿಸಿದರು. 500 ಕೋಟಿ ರೂ. ಬಜೆಟ್‌ನೊಂದಿಗೆ, ಈ ಉಪಕ್ರಮವು ದೇಶದಲ್ಲಿ ಎಐ ಸಂಶೋಧನೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಅದರ ಬಳಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಎಐ ವಿಶ್ವಾದ್ಯಂತ ಕೈಗಾರಿಕೆಗಳನ್ನು ಪರಿವರ್ತಿಸುತ್ತಿದೆ. ಭಾರತವು ಎಐ ಸಂಶೋಧನೆ ಮತ್ತು ಅದರ ಪ್ರಾಯೋಗಿಕ ಅನ್ವಯಿಕೆಗಳಲ್ಲಿ ಮುನ್ನಡೆಸಬೇಕಾಗಿದೆ ಎಂದು ಹಣಕಾಸು ಸಚಿವೆ ಸೀತಾರಾಮನ್ ಹೇಳಿದರು. ಇಂಡಿಯಾಎಐ ಮಿಷನ್‌ನ ಭಾಗವಾಗಿ ದೇಶೀಯ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಸ್ (LLM) ನಿರ್ಮಿಸಲು ದೇಶವು ಯೋಜಿಸುತ್ತಿದೆ. ಕಳೆದ ತಿಂಗಳು ಅಶ್ವಿನಿ ವೈಷ್ಣವ್ ಅವರು ಆರು ತಿಂಗಳೊಳಗೆ ಕೈಗೆಟುಕುವ ವೆಚ್ಚದಲ್ಲಿ "ಸುರಕ್ಷಿತ ಮತ್ತು ಸುಭದ್ರ" ಸ್ಥಳೀಯ ಎಐ ಮಾದರಿಯನ್ನು ಪ್ರಾರಂಭಿಸುವ ಸರ್ಕಾರದ ಯೋಜನೆಯನ್ನು ಬಹಿರಂಗಪಡಿಸಿದರು.
ಇದನ್ನೂ ಓದಿ:'ಸರ್ಕಾರಿ ಕೆಲಸಗಳಿಗೆ ChatGPT, DeepSeek ಬಳಸಬೇಡಿ': ಹಣಕಾಸು ಸಚಿವಾಲಯ ಸುತ್ತೋಲೆ