IIT Madras And ISRO: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೊತೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ ಮದ್ರಾಸ್) ಕೈಜೋಡಿಸಿದೆ. ಐಐಟಿ ಮದ್ರಾಸ್ ಫ್ಲೂಯಿಡ್ ಮತ್ತು ಥರ್ಮಲ್ ಸೈನ್ಸ್ ಕೇಂದ್ರವನ್ನು ಸಿದ್ಧಪಡಿಸಲು ಇಸ್ರೋ ಜೊತೆಗೆ ಪಾಲುದಾರಿಕೆ ಹೊಂದಿದೆ. ಈ ಕೇಂದ್ರದ ಸ್ಥಾಪನೆಗಾಗಿ ಇಸ್ರೋ 1.84 ಕೋಟಿ ಸೀಡ್ ಫಂಡಿಂಗ್ ಬಿಡುಗಡೆ ಮಾಡಿದೆ.
ಈ ಕೇಂದ್ರವು ಇಸ್ರೋಗೆ ಪ್ರಮುಖ ಸಂಶೋಧನಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಬಾಹ್ಯಾಕಾಶ ನೌಕೆ ಮತ್ತು ಉಡಾವಣಾ ವಾಹನಗಳಿಗೆ ಉಷ್ಣಾಂಶ ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ. ಐಐಟಿ ಮದ್ರಾಸ್ ಅಧ್ಯಾಪಕರು ತಮ್ಮ ಪರಿಣತಿಯನ್ನು ಆಧರಿಸಿ ವಿನ್ಯಾಸ, ವಿಶ್ಲೇಷಣೆ ಮತ್ತು ಥರ್ಮಲ್ ಘಟಕಗಳ ಪರೀಕ್ಷೆಗೆ ಸಹಾಯ ಮಾಡುತ್ತಾರೆ.
ಈ ಸಹಯೋಗಕ್ಕಾಗಿ ತಿಳುವಳಿಕೆ ಒಪ್ಪಂದಕ್ಕೆ (MoU) ನವೆಂಬರ್ 11, 2024ರಂದು ಐಐಟಿ ಮದ್ರಾಸ್‌ನಲ್ಲಿ ಐಐಟಿ ಮದ್ರಾಸ್‌ನ ಕೈಗಾರಿಕಾ ಸಲಹೆ ಮತ್ತು ಪ್ರಾಯೋಜಿತ ಸಂಶೋಧನೆಯ ಡೀನ್ ಪ್ರೊ.ಮನು ಸಂತಾನಂ ಮತ್ತು ಇಸ್ರೋ ತಂತ್ರಜ್ಞಾನ ಅಭಿವೃದ್ಧಿ ಮತ್ತು ಆವಿಷ್ಕಾರದ ನಿರ್ದೇಶಕ ವಿಕ್ಟರ್ ಜೋಸೆಫ್ ಟಿ. ಸಹಿ ಹಾಕಿದರು. ಐಐಟಿ ಮದ್ರಾಸ್‌ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಅರವಿಂದ್ ಪಟ್ಟಮಟ್ಟ ಮತ್ತು ಎರಡೂ ಸಂಸ್ಥೆಗಳ ಇತರ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಏನಿದರ ಉದ್ದೇಶ?:
ಥರ್ಮಲ್ ಮ್ಯಾನೇಜ್‌ಮೆಂಟ್ ರಿಸರ್ಚ್ ಹಬ್:ಬಾಹ್ಯಾಕಾಶ ನೌಕೆ ಮತ್ತು ಉಡಾವಣಾ ವಾಹನಗಳಿಗೆ ಸಂಬಂಧಿಸಿದ ಉಷ್ಣಾಂಶ ಕುರಿತ ಸವಾಲುಗಳನ್ನು ಪರಿಹರಿಸುವುದು ಕೇಂದ್ರದ ಉದ್ದೇಶ.
ಧನಸಹಾಯ:ಮೂಲಸೌಕರ್ಯ, ಉಪಕರಣಗಳು ಮತ್ತು ಭವಿಷ್ಯದ ಸಂಶೋಧನೆಯ ಅಗತ್ಯಗಳಿಗಾಗಿ ಇಸ್ರೋ ಆರಂಭದಲ್ಲಿ 1.84 ಕೋಟಿ ರೂ.ಯನ್ನು ಒದಗಿಸುತ್ತದೆ.
ಸುಧಾರಿತ ಸಂಶೋಧನಾ ಯೋಜನೆಗಳು: ಬಾಹ್ಯಾಕಾಶ ನೌಕೆಯ ಉಷ್ಣ ನಿರ್ವಹಣೆ, ಹೈಬ್ರಿಡ್ ರಾಕೆಟ್‌ಗಳಲ್ಲಿನ ದಹನ ಅಸ್ಥಿರತೆ ಮತ್ತು ಕ್ರಯೋಜೆನಿಕ್ ಟ್ಯಾಂಕ್ ಥರ್ಮೋಡೈನಾಮಿಕ್ಸ್‌ನಂತಹ ನಿರ್ಣಾಯಕ ಕ್ಷೇತ್ರಗಳನ್ನು ಕೇಂದ್ರ ತಿಳಿಸುತ್ತದೆ.
ಉದ್ಯಮ-ಅಕಾಡೆಮಿಯಾ ಸಹಯೋಗ: ಈ ಕೇಂದ್ರವು ಇಸ್ರೋ ವಿಜ್ಞಾನಿಗಳು ಮತ್ತು ಐಐಟಿ ಮದ್ರಾಸ್ ಅಧ್ಯಾಪಕರ ನಡುವೆ ಹೆಚ್ಚಿನ ಸಹಯೋಗವನ್ನು ಉತ್ತೇಜಿಸುತ್ತದೆ. ಫ್ಲೂಯಿಡ್ ಮತ್ತು ಥರ್ಮಲ್ ಸೈನ್ಸ್‌ನಲ್ಲಿ ನಾವೀನ್ಯತೆಯನ್ನು ಉತ್ತೇಜಿಸುತ್ತದೆ.
ಕೇಂದ್ರದ ಯೋಜನಾ ಸಂಯೋಜಕ ಪ್ರೊಫೆಸರ್ ಅರವಿಂದ್ ಪಟ್ಟಮಟ್ಟಾ ಮಾತನಾಡಿ, ಈ ಕೇಂದ್ರವು ಇಸ್ರೋ ಮತ್ತು ಐಐಟಿ ಮದ್ರಾಸ್ ನಡುವಿನ ಅನನ್ಯ ಸಹಯೋಗವನ್ನು ಸುಗಮಗೊಳಿಸುತ್ತದೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಬೆಂಬಲಿಸಲು ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸಲು ಥರ್ಮಲ್ ಸೈನ್ಸ್‌ನಲ್ಲಿ ಜಂಟಿ ಸಂಶೋಧನೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೇಳಿದರು.
ಐಐಟಿ ಮದ್ರಾಸ್ ಮತ್ತು ಇಸ್ರೋ ಈ ಹಿಂದೆ 1985ರಲ್ಲಿ ಸ್ವಾವಲಂಬಿ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಸಂಶೋಧನೆಯನ್ನು ಉತ್ತೇಜಿಸಲು 'ಇಸ್ರೋ-ಐಐಟಿ ಎಂ ಸ್ಪೇಸ್ ಟೆಕ್ನಾಲಜಿ' ಸೆಲ್ ಸ್ಥಾಪಿಸಿತ್ತು. ಈಗ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಇಸ್ರೋ ಉದ್ದೇಶಗಳನ್ನು ಬೆಂಬಲಿಸಲು ಥರ್ಮಲ್ ಮ್ಯಾನೆಜ್ಮಂಟ್ ರಿಸರ್ಚ್ ಮತ್ತು ಇತರ ನಿರ್ಣಾಯಕ ಕ್ಷೇತ್ರಗಳನ್ನು ಕೇಂದ್ರೀಕರಿಸಲು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ಪ್ರಧಾನಿ, ಸಿಎಂ, ಸೆಲೆಬ್ರಿಟಿಗಳು ಬಳಸುವ ಬುಲೆಟ್ ಪ್ರೂಫ್ ವಾಹನ ತಯಾರಿಸುವುದೆಲ್ಲಿ ಗೊತ್ತಾ?