ಇಂದೋರ್ (ಮಧ್ಯ ಪ್ರದೇಶ): ನಡೆದಾಡುವಾಗ ಉಂಟಾಗುವ ಚಲನ ಶಕ್ತಿಯಿಂದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿ, ಅದನ್ನು ಇತರ ಎಲೆಕ್ಟ್ರಾನಿಕ್ ಸಾಧನಗಳಿಗೆ ಪೂರೈಸಬಲ್ಲ ಮತ್ತು ನಿಖರವಾದ ಲೈವ್ ಲೊಕೇಶನ್ ಟ್ರ್ಯಾಕಿಂಗ್ ಗಾಗಿ ಉಪಗ್ರಹ ಜಿಪಿಎಸ್ ಮಾಡ್ಯೂಲ್ ಹೊಂದಿರುವ ಶೂ ಒಂದನ್ನು ಇಂದೋರ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
ನಡೆದಾಗ ವಿದ್ಯುತ್ ಉತ್ಪಾದಿಸುವ, ಜಿಪಿಎಸ್ ಚಾಲಿತ ಶೂ ತಯಾರಿಸಿದ ಐಐಟಿ ಇಂದೋರ್ (ANI) ಇಂಥ ನವೀನ ಟ್ರೈಬೊ-ಎಲೆಕ್ಟ್ರಿಕ್ ನ್ಯಾನೊಜನರೇಟರ್ (ಟಿಇಎನ್ಜಿ) ಆಧಾರಿತ, ಶಕ್ತಿಯನ್ನು ಉತ್ಪಾದಿಸುವ 10 ಜೋಡಿ ಶೂ ಸೋಲ್ಗಳನ್ನು ಈಗಾಗಲೇ ಐಐಟಿ ಇಂದೋರ್ ತಯಾರಿಸಿ ಅವುಗಳನ್ನು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್ಡಿಒ) ಹಸ್ತಾಂತರಿಸಿದೆ.
ಸುಧಾರಿತ ಟ್ರ್ಯಾಕಿಂಗ್ ತಂತ್ರಜ್ಞಾನಗಳೊಂದಿಗೆ ಸುಸ್ಥಿರ ಇಂಧನ ಉತ್ಪಾದನೆಯ ತಂತ್ರಜ್ಞಾನವನ್ನು ಸಂಯೋಜಿಸುವಲ್ಲಿ ಇದು ಮಹತ್ವದ ಆವಿಷ್ಕಾರವಾಗಿದೆ. ಐಐಟಿ ಇಂದೋರ್ನ ಪ್ರೊಫೆಸರ್ ಐ ಎ ಪಳನಿ ಅವರ ತಜ್ಞರ ಮಾರ್ಗದರ್ಶನದಲ್ಲಿ ಈ ಶೂಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಮಿಲಿಟರಿಗೆ ಭಾರಿ ಪ್ರಯೋಜನ:
ಈ ಬಗ್ಗೆ ಮಾತನಾಡಿದ ಐಐಟಿ ಇಂದೋರ್ನ ನಿರ್ದೇಶಕ ಪ್ರೊಫೆಸರ್ ಸುಹಾಸ್ ಜೋಶಿ, "ಈ ತಂತ್ರಜ್ಞಾನವು ಮಿಲಿಟರಿ ಉದ್ದೇಶದ ಬಳಕೆಯಲ್ಲಿ ಬಹಳ ಮಹತ್ವ ಹೊಂದಿದೆ. ಇದರಲ್ಲಿನ ನೈಜ-ಸಮಯದ ಲೊಕೇಶನ್ ಟ್ರ್ಯಾಕಿಂಗ್ ವೈಶಿಷ್ಟ್ಯವು ಮಿಲಿಟರಿ ಸಿಬ್ಬಂದಿಯ ಸುರಕ್ಷತೆ ಮತ್ತು ಸಮನ್ವಯವನ್ನು ಹೆಚ್ಚಿಸುತ್ತವೆ. ಈ ಮೂಲಕ ಅವರ ಕಾರ್ಯಾಚರಣೆಯ ದಕ್ಷತೆ ಮತ್ತು ಭದ್ರತೆಯೂ ಹೆಚ್ಚಾಗುತ್ತದೆ. TENG ತಂತ್ರಜ್ಞಾನ ಆಧರಿತ ಬೂಟುಗಳಲ್ಲಿ ಅಗತ್ಯ ಜಿಪಿಎಸ್ ಮತ್ತು ಆರ್ಎಫ್ಐಡಿ ವ್ಯವಸ್ಥೆಗಳನ್ನು ಕೂಡ ಅಳವಡಿಸಬಹುದಾಗಿದ್ದು, ವಿವಿಧ ಮಿಲಿಟರಿ ಅಗತ್ಯಗಳಿಗೆ ಸುಸ್ಥಿರ ಮತ್ತು ವಿಶ್ವಾಸಾರ್ಹ ಪ್ರಯೋಜನಗಳನ್ನು ಒದಗಿಸುತ್ತದೆ." ಎಂದು ಹೇಳಿದರು.
"ದಕ್ಷ ಮತ್ತು ಪೋರ್ಟಬಲ್ ವಿದ್ಯುತ್ ಮೂಲಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ, TENG ಆಧಾರಿತ ಶೂ ಸಿಂಗಲ್ ತಂತ್ರಜ್ಞಾನ ಮತ್ತು ಇತರ ಸುಧಾರಿತ ಡಿಆರ್ಡಿಒ ಯೋಜನೆಗಳು ಸೇರಿದಂತೆ ಐಐಟಿ ಇಂದೋರ್ನ ಆವಿಷ್ಕಾರಗಳು ಇಂಧನ ಉತ್ಪಾದನೆ, ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ವಿವಿಧ ರಕ್ಷಣಾ ಮತ್ತು ಕೈಗಾರಿಕಾ ಅನ್ವಯಿಕೆಗಳಲ್ಲಿ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿವೆ. ಈ ಆವಿಷ್ಕಾರಗಳು ವ್ಯಾಪಕ ಶ್ರೇಣಿಯ ಅಗತ್ಯಗಳಿಗೆ ಸುಸ್ಥಿರ ಮತ್ತು ಪ್ರಾಯೋಗಿಕ ಪರಿಹಾರಗಳನ್ನು ನೀಡುತ್ತವೆ ಮತ್ತು ಈ ನಿಟ್ಟಿನಲ್ಲಿ ರಕ್ಷಣಾ ತಂತ್ರಜ್ಞಾನದ ಭವಿಷ್ಯವನ್ನು ಪ್ರವರ್ತಿಸುವಲ್ಲಿ ಐಐಟಿ ಇಂದೋರ್ನ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ" ಎಂದು ಜೋಶಿ ಹೇಳಿದರು.
ಪ್ರತಿ ಹಂತದಲ್ಲೂ ವಿದ್ಯುತ್ ಉತ್ಪಾದನೆ:
ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದ ಪ್ರೊಫೆಸರ್ ಐ ಎ ಪಳನಿ, "ಈ ಶೂಗಳಲ್ಲಿನ TENG ವ್ಯವಸ್ಥೆಯು ಸುಧಾರಿತ ಟ್ರೈಬೊ-ಜೋಡಿಗಳಾದ ಫ್ಲೋರಿನೇಟೆಡ್ ಎಥಿಲೀನ್ ಪ್ರೊಪಿಲೀನ್ (ಎಫ್ಇಪಿ) ಮತ್ತು ಅಲ್ಯೂಮಿನಿಯಂ ಅನ್ನು ಪ್ರತಿ ಹಂತದಲ್ಲೂ ವಿದ್ಯುತ್ ಉತ್ಪಾದಿಸಲು ಬಳಸುತ್ತದೆ. ಈ ಶಕ್ತಿಯನ್ನು ಶೂ ಸೋಲ್ ನೊಳಗಿನ ಕೇಂದ್ರ ಸಾಧನದಲ್ಲಿ ಸಂಗ್ರಹಿಸಲಾಗುತ್ತದೆ. ಇದು ಸಣ್ಣ ಪ್ರಮಾಣದ ಎಲೆಕ್ಟ್ರಾನಿಕ್ ಸರ್ಕ್ಯೂಟ್ಗಳಿಗೆ ಅಗತ್ಯವಾದ ವಿದ್ಯುತ್ ಮೂಲವಾಗಿ ಕೆಲಸ ಮಾಡುತ್ತದೆ. ಹೆಚ್ಚುವರಿಯಾಗಿ, ಶೂಗಳು ಅತ್ಯಾಧುನಿಕ ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ಹೊಂದಿವೆ. ಇದರಲ್ಲಿ 50 ಮೀಟರ್ ವ್ಯಾಪ್ತಿಯೊಂದಿಗೆ ಆರ್ಎಫ್ಐಡಿ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಮತ್ತು ನಿಖರವಾದ ಲೈವ್ ಲೊಕೇಶನ್ ಟ್ರ್ಯಾಕಿಂಗ್ಗಾಗಿ ಉಪಗ್ರಹ ಆಧಾರಿತ ಜಿಪಿಎಸ್ ಮಾಡ್ಯೂಲ್ ಸೇರಿವೆ." ಎಂದರು.
ಅಲ್ಜೈಮರ್ ಕಾಯಿಲೆ ಇರುವವರಿಗೆ ಉಪಯೋಗ:ಮಿಲಿಟರಿ ಬಳಕೆಯ ಹೊರತಾಗಿ, ಈ TENG-ಚಾಲಿತ ಬೂಟುಗಳು ಸಾಮಾನ್ಯ ನಾಗರಿಕರು ಮತ್ತು ಕೈಗಾರಿಕೆಗಳನ್ನು ಕೂಡ ಬಳಸಬಹುದು. ವಯಸ್ಸಾದ ಹಿರಿಯರಿರುವ ಕುಟುಂಬಗಳಿಗೆ, ಅದರಲ್ಲೂ ವಿಶೇಷವಾಗಿ ಅಲ್ಜೈಮರ್ ಕಾಯಿಲೆ ಇರುವವರಿಗೆ ಈ ಶೂಗಳನ್ನು ತೊಡಿಸಿದಲ್ಲಿ, ಇದರಲ್ಲಿನ ಲೈಟ್ ಟ್ರ್ಯಾಕಿಂಗ್ನಿಂದ ಅವರು ಎಲ್ಲೇ ಹೋದರೂ ಅವರನ್ನು ಪತ್ತೆ ಮಾಡಬಹುದು. ಇನ್ನು ಪಾಲಕರು ತಮ್ಮ ಮಕ್ಕಳಿಗೆ ಈ ಶೂ ತೊಡಿಸುವ ಮೂಲಕ ಅವರು ಶಾಲೆಯಲ್ಲಿ ಅಥವಾ ಬೇರೆ ಎಲ್ಲಿದ್ದಾರೆ ಎಂಬುದನ್ನು ಟ್ರ್ಯಾಕ್ ಮಾಡಬಹುದು. ಶಾಲೆಗಳು ನಿಖರವಾದ ಹಾಜರಾತಿ ದಾಖಲೆಗಳನ್ನು ನಿರ್ವಹಿಸಲು ಆರ್ಎಫ್ಐಡಿ ತಂತ್ರಜ್ಞಾನವನ್ನು ಬಳಸಬಹುದು. ಕೈಗಾರಿಕೆಗಳಲ್ಲಿ ಹಾಜರಾತಿ ಟ್ರ್ಯಾಕಿಂಗ್ ಮತ್ತು ಕಾರ್ಮಿಕರ ಮೇಲ್ವಿಚಾರಣೆಗೆ ಕೂಡ ಈ ಶೂಗಳು ಉಪಯುಕ್ತವಾಗಿವೆ ಎಂದು ಪ್ರಕಟಣೆ ತಿಳಿಸಿದೆ.
ಕ್ರೀಡಾಪಟುಗಳ ಪಾದದ ಚಲನೆಗಳನ್ನು ವಿಶ್ಲೇಷಿಸುವ ಮೂಲಕ ಅಥ್ಲೆಟಿಕ್ ಉದ್ಯಮ ಕೂಡ ಈ ಬೂಟುಗಳಿಂದ ಪ್ರಯೋಜನ ಪಡೆಯಬಹುದು. ಇದು ಕಾರ್ಯಕ್ಷಮತೆ ಮತ್ತು ತರಬೇತಿ ತಂತ್ರಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಚಾರಣ ಮತ್ತು ಪರ್ವತಾರೋಹಿಗಳಿಗೆ ಶೂಗಳು ತಮ್ಮ ಸ್ವಯಂ-ಚಾಲಿತ ಜಿಪಿಎಸ್ ವೈಶಿಷ್ಟ್ಯದೊಂದಿಗೆ ವಿಶ್ವಾಸಾರ್ಹ ಟ್ರ್ಯಾಕಿಂಗ್ ಅನ್ನು ಒದಗಿಸುತ್ತವೆ.
ಇದನ್ನೂ ಓದಿ : 15 ನಿಮಿಷ ಸಾಕು! ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ಚಾರ್ಜಿಂಗ್ ಪ್ಯಾಸೆಂಜರ್ ಆಟೋ ಬಿಡುಗಡೆ - Electric Passenger Auto