ಕರ್ನಾಟಕ

karnataka

ETV Bharat / technology

ಟೈಪಿಂಗ್​ಗಿಂತ ಕೈಬರಹದಿಂದ ಸ್ಮರಣಶಕ್ತಿ ಹೆಚ್ಚಳ: ಅಧ್ಯಯನ ವರದಿ

ಕೀಬೋರ್ಡ್​ನಲ್ಲಿ ಟೈಪ್ ಮಾಡುವುದಕ್ಕಿಂತ ಕೈಯಿಂದ ಬರೆಯುವುದು ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿ ಎಂದು ಹೊಸ ಅಧ್ಯಯನದಲ್ಲಿ ಕಂಡು ಬಂದಿದೆ.

Writing by hand may be good for your brain than typing on a keyboard: Study
Writing by hand may be good for your brain than typing on a keyboard: Study

By ETV Bharat Karnataka Team

Published : Jan 28, 2024, 3:33 PM IST

ಲಂಡನ್ : ನಿಮ್ಮ ಮೆದುಳನ್ನು ಮತ್ತಷ್ಟು ಚುರುಕುಗೊಳಿಸಲು ಬಯಸುವಿರಾ? ಹಾಗಾದರೆ ಕೀಬೋರ್ಡ್ ನಲ್ಲಿ ಟೈಪ್ ಮಾಡುವ ಬದಲು ಹೆಚ್ಚೆಚ್ಚು ಕೈಯಿಂದ ಬರೆಯಲು ಆರಂಭಿಸಿ ಎನ್ನುತ್ತಾರೆ ವಿಜ್ಞಾನಿಗಳು. ಕೈಯಿಂದ ಬರೆಯುವುದಕ್ಕಿಂತ ಕೀಬೋರ್ಡ್​ನಲ್ಲಿ ವೇಗವಾಗಿ ಟೈಪಿಸಬಹುದು ಎಂಬ ಕಾರಣಕ್ಕೆ ನಾವು ಕೀಬೋರ್ಡ್​ ಅನ್ನೇ ಹೆಚ್ಚಾಗಿ ಅವಲಂಬಿಸಿರುವುದು ಹೌದಾದರೂ ಕೈಯಿಂದ ಬರೆಯುವುದರಿಂದ ಕಾಗುಣಿತ ನಿಖರತೆ ಹೆಚ್ಚಾಗುತ್ತದೆ ಮತ್ತು ಮೆದುಳಿನ ಕಾರ್ಯಕ್ಷಮತೆ ಸುಧಾರಿಸುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.

ಕೈಯಿಂದ ಅಕ್ಷರಗಳನ್ನು ಬರೆಯುವ ಪ್ರಕ್ರಿಯೆಯಲ್ಲಿ ಮೆದುಳಿನ ಕೆಲಸ ಹೆಚ್ಚಾಗಿರುತ್ತದೆಯಾ ಎಂಬುದನ್ನು ಕಂಡುಹಿಡಿಯಲು ನಾರ್ವೆಯ ಸಂಶೋಧಕರು ಎರಡೂ ಬರವಣಿಗೆ ವಿಧಾನಗಳಲ್ಲಿ ಒಳಗೊಂಡಿರುವ ನರ ಜಾಲಗಳ ಬಗ್ಗೆ ಸಂಶೋಧನೆ ಮಾಡಿದ್ದಾರೆ. "ಕೈಯಿಂದ ಬರೆಯುವಾಗ ಕೀಬೋರ್ಡ್​ನಲ್ಲಿ ಟೈಪ್ ಮಾಡುವುದಕ್ಕಿಂತ ಮೆದುಳಿನ ಸಂಪರ್ಕ ಹೆಚ್ಚಾಗಿರುತ್ತದೆ ಎಂಬುದು ಕಂಡು ಬಂದಿದೆ" ಎಂದು ನಾರ್ವೇಜಿಯನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಮೆದುಳಿನ ಸಂಶೋಧಕ ಪ್ರೊಫೆಸರ್ ಆಡ್ರೆ ವ್ಯಾನ್ ಡೆರ್ ಮೀರ್ ಹೇಳಿದರು.

"ಇಂತಹ ವ್ಯಾಪಕವಾದ ಮೆದುಳಿನ ಸಂಪರ್ಕವು ಸ್ಮರಣ ಶಕ್ತಿ ಸುಧಾರಣೆಗೆ ಮತ್ತು ಹೊಸ ಮಾಹಿತಿಯನ್ನು ಸೃಷ್ಟಿಸಲು ನಿರ್ಣಾಯಕವಾಗಿದೆ ಮತ್ತು ಕಲಿಕೆಗೆ ಪ್ರಯೋಜನಕಾರಿಯಾಗಿದೆ" ಎಂದು ವ್ಯಾನ್ ಡೆರ್ ಮೀರ್ ಹೇಳಿದರು.

ಫ್ರಾಂಟಿಯರ್ಸ್ ಇನ್ ಸೈಕಾಲಜಿ ಜರ್ನಲ್​ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ. ಈ ಸಂಶೋಧನೆಯಲ್ಲಿ ವಿಜ್ಞಾನಿಗಳ ತಂಡವು 36 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಸಮೀಕ್ಷೆಗೊಳಪಡಿಸಿದೆ. ಪರದೆಯ ಮೇಲೆ ಕಾಣಿಸಿಕೊಳ್ಳುವ ಪದವನ್ನು ಪದೆ ಪದೇ ಬರೆಯುವಂತೆ ಅಥವಾ ಟೈಪಿಸುವಂತೆ ಅವರಿಗೆ ಸೂಚಿಸಲಾಯಿತು. ಅವರು ಹೀಗೆ ಮಾಡುವಾಗ ಅವರ ಇಇಜಿ ಡೇಟಾವನ್ನು ಸಂಗ್ರಹಿಸಲಾಯಿತು.

ಬರೆಯುವಾಗ ಅವರು ಟಚ್ ಸ್ಕ್ರೀನ್ ಮೇಲೆ ನೇರವಾಗಿ ಡಿಜಿಟಲ್ ಪೆನ್ ಮೂಲಕ ಕರ್ಸಿವ್ ನಲ್ಲಿ ಬರೆದರು. ಟೈಪ್ ಮಾಡುವಾಗ ಅವರು ಕೀಬೋರ್ಡ್ ನಲ್ಲಿ ಕೀಲಿಗಳನ್ನು ಒತ್ತಲು ಒಂದೇ ಬೆರಳನ್ನು ಬಳಸಿರುವುದು ಕಂಡು ಬಂದಿತು. 256 ಸಣ್ಣ ಸಂವೇದಕಗಳನ್ನು ಬಳಸಿಕೊಂಡು ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ಚಟುವಟಿಕೆಯನ್ನು ಅಳೆಯುವ ಹೆಚ್ಚಿನ-ಸಾಂದ್ರತೆಯ ಇಇಜಿಗಳನ್ನು ಈ ಸಂದರ್ಭದಲ್ಲಿ ಅವರ ತಲೆಗೆ ಅಳವಡಿಸಲಾಗಿತ್ತು. ಪ್ರತಿ ಐದು ಸೆಕೆಂಡ್​ ಪ್ರಾಂಪ್ಟ್​ ಅವಧಿಯಲ್ಲಿ ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ಚಟುವಟಿಕೆಯನ್ನು ಈ ಮೂಲಕ ದಾಖಲಿಸಲಾಯಿತು.

ವಿದ್ಯಾರ್ಥಿಗಳು ಕೈಯಿಂದ ಬರೆಯುವಾಗ ಅವರಲ್ಲಿ ವಿವಿಧ ಮೆದುಳಿನ ಪ್ರದೇಶಗಳ ಸಂಪರ್ಕ ಹೆಚ್ಚಾಗಿತ್ತು. ಆದರೆ ಅವರು ಟೈಪ್ ಮಾಡಿದಾಗ ಇಷ್ಟೊಂದು ಮೆದುಳಿನ ಸಂಪರ್ಕ ಇರಲಿಲ್ಲ ಎಂದು ಫ್ರಾಂಟಿಯರ್ಸ್ ಇನ್ ಸೈಕಾಲಜಿ ಜರ್ನಲ್​ನಲ್ಲಿ ಪ್ರಕಟವಾದ ಫಲಿತಾಂಶಗಳು ತೋರಿಸಿವೆ.

ಅಕ್ಷರಗಳನ್ನು ರೂಪಿಸುವಾಗ ನಡೆಸುವ ಬೆರಳುಗಳ ಚಲನೆಯು ಮೆದುಳಿನ ಸಂಪರ್ಕವನ್ನು ಉತ್ತೇಜಿಸುವುದರಿಂದ ಕೈಬರಹವು ಸಹ ಕರ್ಸಿವ್ ಬರವಣಿಗೆಯಂತೆಯೇ ಕಲಿಕೆಗೆ ಸಮಾನ ಪ್ರಯೋಜನಗಳನ್ನು ಹೊಂದಿರುತ್ತದೆ ಎಂದು ತಿಳಿದು ಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಒಂದೇ ಬೆರಳಿನಿಂದ ಕೀ ಗಳನ್ನು ಟೈಪಿಸುವ ಸರಳ ಚಲನೆಯು ಮೆದುಳಿಗೆ ಕಡಿಮೆ ಉತ್ತೇಜಕವಾಗಿದೆ.

"ಟ್ಯಾಬ್ಲೆಟ್​ನಲ್ಲಿ ಬರೆಯಲು ಮತ್ತು ಓದಲು ಕಲಿತ ಮಕ್ಕಳು, 'ಬಿ' (b) ಮತ್ತು 'ಡಿ' (d) ನಂತಹ ಪರಸ್ಪರ ಪ್ರತಿಬಿಂಬಗಳಾಗಿರುವ ಅಕ್ಷರಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಏಕೆ ಕಷ್ಟಪಡುತ್ತಾರೆ ಎಂಬುದನ್ನು ಇದು ವಿವರಿಸುತ್ತದೆ. ಆ ಅಕ್ಷರಗಳನ್ನು ಬರೆಯುವಾಗ ಯಾವ ಭಾವನೆ ಮೂಡುತ್ತದೆ ಎಂಬುದನ್ನು ಅವರು ಅಕ್ಷರಶಃ ತಮ್ಮ ದೇಹದಿಂದ ಅನುಭವಿಸಿರುವುದಿಲ್ಲ" ಎಂದು ವ್ಯಾನ್ ಡೆರ್ ಮೀರ್ ಹೇಳಿದರು.

ಇದನ್ನೂ ಓದಿ : 3 ಟ್ರಿಲಿಯನ್ ಡಾಲರ್ ತಲುಪಿದ ಮೈಕ್ರೋಸಾಫ್ಟ್​ ಮಾರುಕಟ್ಟೆ ಮೌಲ್ಯ

ABOUT THE AUTHOR

...view details