ನ್ಯೂಯಾರ್ಕ್:ಹೊಸ ಪ್ರಯೋಗಗಳಿಗೆ ಹೆಸರುವಾಸಿಯಾದ ಟೆಸ್ಲಾ, ಎಕ್ಸ್ ಕಂಪನಿಯ ಒಡೆಯ ಎಲಾನ್ ಮಸ್ಕ್ ಈಗ ಮತ್ತೊಂದು ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಮಾನವನ ಮೆದುಳಿನಲ್ಲಿ ಕೃತಕ ಬುದ್ಧಿಮತ್ತೆಯ ಬ್ರೈನ್ ಚಿಪ್ ಅನ್ನು ತಮ್ಮ ಒಡೆತನದ ನ್ಯೂರಾಲಿಂಕ್ ಕಂಪನಿಯ ಮೂಲಕ ಯಶಸ್ವಿಯಾಗಿ ಅಳವಡಿಸಿದ್ದಾರೆ. ಪ್ರಯೋಗಕ್ಕೊಳಗಾದ ವ್ಯಕ್ತಿ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾನೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
ಮಾನವನ ಮೆದುಳಿನಲ್ಲಿ ಕೃತಕ ಬುದ್ಧಿಮತ್ತೆಯ ಚಿಪ್ ಅಳವಡಿಸುವ ಪ್ರಯೋಗ ಪ್ರಪಂಚದಲ್ಲಿಯೇ ಮೊದಲಾಗಿದೆ. ನ್ಯೂರಾಲಿಂಕ್ ಕಂಪನಿಯು ವ್ಯಕ್ತಿಯಲ್ಲಿ ಸೋಮವಾರ ಈ ಚಿಪ್ ಅಳವಡಿಸಿದೆ. ನರಕೋಶಗಳ ಪತ್ತೆಯು (ನ್ಯೂರಾನ್ ಸ್ಪೈಕ್) ನಿಖರವಾಗಿ ಕೆಲಸ ಮಾಡುತ್ತಿದೆ. ಈ ಪ್ರಯೋಗ ಭರವಸೆಯ ಫಲಿತಾಂಶಗಳನ್ನು ನೀಡುತ್ತಿದೆ ಎಂದು ವಿಶ್ವದ 2ನೇ ಸಿರಿವಂತ ವ್ಯಕ್ತಿಯಾದ ಮಸ್ಕ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಪ್ರಯೋಗದ ಕಾರ್ಯವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲವಾದರೂ, ನ್ಯೂರಾಲಿಂಕ್ ನಡೆಸಿದ ಮೊದಲ ಪ್ರಯತ್ನದ ಕುರಿತ ಕೆಲ ವಿಚಾರಗಳನ್ನು ತಿಳಿಸಿದ್ದಾರೆ. ಇದಕ್ಕೆ ಅವರು 'ಟೆಲಿಪತಿ' ಎಂದು ಹೆಸರಿಸಿದ್ದಾರೆ. ಬ್ರೈನ್ ಚಿಪ್ ಅನ್ನು ಆಯ್ದ ವ್ಯಕ್ತಿಯಲ್ಲಿ ಅಳವಡಿಸಿ ಪರೀಕ್ಷಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಬ್ರೈನ್ ಚಿಪ್ನ ಉಪಯೋಗವೇನು?:ಎದುರಿಗಿನ ವ್ಯಕ್ತಿಯ ಮನಸ್ಸು ಅಥವಾ ಯೋಚನೆಗಳನ್ನು ಅರಿಯಲು ಸಾಮಾನ್ಯ ಮನುಷ್ಯರಿಗೆ ಸಾಧ್ಯವಿಲ್ಲ. ಇಂತಿಪ್ಪ, ಮೆದುಳಿನಲ್ಲಿ ಟೆಲಿಪತಿ ಚಿಪ್ ಅಳವಡಿಕೆಯ ಬಳಿಕ ಆ ಮನುಷ್ಯ ಕಂಪ್ಯೂಟರ್, ಮೊಬೈಲ್ ಅಥವಾ ಯಾವುದೇ ಗ್ಯಾಜೆಟ್ ಅನ್ನು ನಿಯಂತ್ರಿಸಬಲ್ಲ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ. ಜೊತೆಗೆ ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರಂತಹ ವ್ಯಕ್ತಿಗಳು ಕೂಡ ಇದರ ನೆರವಿನಿಂದ ಸಹಜವಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. ಈ ಪ್ರಯೋಗ ಮಾನವನಲ್ಲಿ ಯಶಸ್ವಿಯಾದರೆ, ಇದರ ಮೊದಲ ಫಲಾನುಭವಿಗಳು ದೈಹಿಕ ನ್ಯೂನತೆ ಉಳ್ಳವರಾಗಿರುತ್ತಾರೆ ಎಂದು ಎಲಾನ್ ಮಸ್ಕ್ ಘೋಷಿಸಿದ್ದಾರೆ.
ಮಸ್ಕ್ ಅವರ ನ್ಯೂರಾಲಿಂಕ್ ಕಂಪನಿಯು ಇದರ ಮೇಲಿನ ಪ್ರಯೋಗಕ್ಕಾಗಿ 2023 ರಲ್ಲಿ ಅನುಮತಿ ಪಡೆದುಕೊಂಡಿತು. ಸರ್ಜಿಕಲ್ ರೋಬೋಟ್ ಎಂಬ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೈನ್ ಚಿಪ್ ಅನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ಸುರಕ್ಷಿತವಾಗಿದ್ದು, ಮಾನವನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಮತ್ತು ಪಾರ್ಕಿನ್ಸನ್ ರೋಗಕ್ಕೆ ಚಿಕಿತ್ಸಾ ರೂಪವಾಗಿ ಇದರ ಬಳಕೆ ಮಾಡಲಾಗುತ್ತದೆ ಎಂದು ಸಂಸ್ಥೆ ಘೋಷಿಸಿದೆ. ಮಾನವನ ಮೇಲಿನ ಪ್ರಯೋಗಕ್ಕೂ ಇದಕ್ಕೂ ಮೊದಲು ಈ ಚಿಪ್ ಅನ್ನು ಹಂದಿ ಮತ್ತು ಮಂಗಗಳ ಮೇಲೆ ಯಶಸ್ವಿಯಾಗಿ ಪ್ರಯೋಗ ಮಾಡಲಾಗಿದೆ. ಮಂಗವೊಂದು ಚಿಪ್ ನೆರವಿನಿಂದ ವಿಡಿಯೋ ಗೇಮ್ ಆಡಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ:ಪ್ರೈವಸಿ, ದತ್ತಾಂಶ ಭದ್ರತೆಗೆ ಅಪಾಯ: ಎಐ ಅಳವಡಿಕೆಗೆ ಕಂಪನಿಗಳ ಹಿಂದೇಟು