ಸ್ಯಾನ್ ಫ್ರಾನ್ಸಿಸ್ಕೋ:ಅಮೆರಿಕದಲ್ಲಿ ಮಕ್ಕಳ ಆನ್ ಲೈನ್ ಸುರಕ್ಷತೆ ಕುರಿತು ಸೆನೆಟ್ ನ್ಯಾಯಾಂಗ ಸಮಿತಿ ವಿಚಾರಣೆ ವೇಳೆ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್ ಬರ್ಗ್ ಮಕ್ಕಳ ಪಾಲಕರ ಬಳಿ ಕ್ಷಮೆಯಾಚಿಸಿದ್ದಾರೆ. ಆನ್ಲೈನ್ನಲ್ಲಿ ದುಷ್ಟರಿಂದ ಕಿರುಕುಳಕ್ಕೊಳಗಾದ ಮಕ್ಕಳ ಪಾಲಕರು ಹಾಜರಿದ್ದ ಸಭೆಯಲ್ಲಿ ಸೆನೆಟರ್ ಜೋಶ್ ಹಾವ್ಲೆ (ಆರ್-ಎಂಒ) ಅವರು ಮಕ್ಕಳ ಕುಟುಂಬಗಳ ಕ್ಷಮೆಯಾಚಿಸುವಂತೆ ಜುಕರ್ ಬರ್ಗ್ ಅವರಿಗೆ ಒತ್ತಡ ಹೇರಿದಾಗ, ಅವರು ಕ್ಷಮೆಯಾಚಿಸಿದರು.
"ನೀವು ಅನುಭವಿಸಿದ ಎಲ್ಲ ಕೆಟ್ಟ ಅನುಭವಗಳಿಗೆ ನಾನು ವಿಷಾದಿಸುತ್ತೇನೆ" ಎಂದು ಅವರು ಬುಧವಾರ ತಡರಾತ್ರಿ ವಿಚಾರಣೆಯಲ್ಲಿ ಹಾಜರಿದ್ದ ಕುಟುಂಬಗಳಿಗೆ ಹೇಳಿದರು. "ನಿಮ್ಮ ಕುಟುಂಬಗಳು ಅನುಭವಿಸಿದ್ದನ್ನು ಮತ್ತಾರೂ ಅನುಭವಿಸಬಾರದು ಮತ್ತು ಅದಕ್ಕಾಗಿಯೇ ನಾವು ಸಾಕಷ್ಟು ಹೂಡಿಕೆ ಮಾಡುತ್ತೇವೆ ಮತ್ತು ನಿಮ್ಮ ಕುಟುಂಬಗಳು ಅನುಭವಿಸಿದ ವಿಷಯಗಳನ್ನು ಯಾರೂ ಅನುಭವಿಸಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಉದ್ಯಮದಾದ್ಯಂತ ಪ್ರಯತ್ನಗಳನ್ನು ಮುಂದುವರಿಸಲಿದ್ದೇವೆ" ಎಂದು ಮೆಟಾ ಸಿಇಒ ಹೇಳಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಸ್ನ್ಯಾಪ್ ಸಿಇಒ ಇವಾನ್ ಸ್ಪೈಗೆಲ್ ಯುಎಸ್ನಲ್ಲಿ 20 ಮಿಲಿಯನ್ ಹದಿಹರೆಯದವರು ಸ್ನ್ಯಾಪ್ ಚಾಟ್ ಬಳಸುತ್ತಾರೆ ಮತ್ತು ಸುಮಾರು 2,00,000 ಪೋಷಕರು ಅವರ ಕುಟುಂಬ ಕೇಂದ್ರದ ಮೇಲ್ವಿಚಾರಣೆ ನಿಯಂತ್ರಣಗಳನ್ನು (Family Center supervision controls) ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಫ್ಯಾಮಿಲಿ ಸೆಂಟರ್ ಮೂಲಕ ಸುಮಾರು 4,00,000 ಹದಿಹರೆಯದವರ ಖಾತೆಗಳನ್ನು ಪೋಷಕರ ಖಾತೆಗೆ ಲಿಂಕ್ ಮಾಡಲಾಗಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.