ನವದೆಹಲಿ: ಕೀಟಗಳ ನಿಯಂತ್ರಣ, ನೈರ್ಮಲ್ಯ ಕಾಪಾಡುವುದು ಮತ್ತು ಜಾಗೃತಿ ಮೂಡಿಸುವ ಮೂಲಕ ಚಂಡಿಪುರ ವೈರಸ್ ಮತ್ತು ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ತಜ್ಞರು ಹೇಳಿದ್ದಾರೆ. ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲ ಭಾಗಗಳಲ್ಲಿ ಚಂಡಿಪುರ ವೈರಸ್ ಮತ್ತು ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಸೋಂಕು ಪ್ರಕರಣಗಳು ಕಂಡು ಬಂದಿವೆ. ಗುಜರಾತ್ನಲ್ಲಿ ಕೆಲ ಮಕ್ಕಳಲ್ಲಿ ಚಂಡಿಪುರ ವೈರಸ್ನ ಲಕ್ಷಣಗಳು ಕಂಡುಬಂದಿದ್ದು, ಸ್ವಲ್ಪ ಆತಂಕ ಮೂಡಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಎಚ್ಎಸ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್ಸಿಡಿಸಿ) ನಿರ್ದೇಶಕ ಪ್ರೊಫೆಸರ್ ಅತುಲ್ ಗೋಯೆಲ್, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಕಲಾವತಿ ಸರನ್ ಮಕ್ಕಳ ಆಸ್ಪತ್ರೆ ಮತ್ತು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ತಜ್ಞರು ಚಂಡಿಪುರ ವೈರಸ್ ಮತ್ತು ಎಇಎಸ್ ಪ್ರಕರಣಗಳ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ.
ಸಾಂಕ್ರಾಮಿಕ ವೈರಸ್ಗಳಿಂದ ದೇಶಾದ್ಯಂತ ಸಣ್ಣ ಪ್ರಮಾಣದಲ್ಲಿ ಎಇಎಸ್ ಪ್ರಕರಣಗಳು ಕಂಡು ಬರುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಗುಜರಾತ್ನಲ್ಲಿ ವರದಿಯಾದ ಎಇಎಸ್ ಪ್ರಕರಣಗಳ ಸಮಗ್ರ ಸಾಂಕ್ರಾಮಿಕ ರೋಗಶಾಸ್ತ್ರೀಯ, ಪರಿಸರ ಮತ್ತು ಕೀಟಶಾಸ್ತ್ರೀಯ ಅಧ್ಯಯನಗಳ ಅಗತ್ಯವನ್ನು ತಜ್ಞರು ಒತ್ತಿ ಹೇಳಿದ್ದಾರೆ.