AUTO SALES NOVEMBER 2024:ಭಾರತೀಯ ಮಾರುಕಟ್ಟೆಯಲ್ಲಿನ ಕಾರು ತಯಾರಕರು ನವೆಂಬರ್ 2024ರ ವಿವಿಧ ಮಾರಾಟದ ಅಂಕಿ - ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಟೊಯೋಟಾ ಇಂಡಿಯಾದಂತಹ ಕಂಪನಿಗಳು ತಮ್ಮ ಮಾರಾಟದಲ್ಲಿ ಹೆಚ್ಚಳವನ್ನು ದಾಖಲಿಸಿದ್ದು, ಹ್ಯುಂಡೈ ಇಂಡಿಯಾದ ಮಾರಾಟವು ಕಳೆದ ತಿಂಗಳು ಕುಸಿತ ಕಂಡಿದೆ.
ಮಾರುತಿ ಸುಜುಕಿ:ಸ್ಥಳೀಯ ಕಾರು ತಯಾರಕ ಮಾರುತಿ ಸುಜುಕಿ ನವೆಂಬರ್ 2024 ರಲ್ಲಿ 1,81,531 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದೆ. ಇದರಲ್ಲಿ ಲಘು ವಾಣಿಜ್ಯ ವಾಹನಗಳೂ ಸೇರಿವೆ. ಕಂಪನಿಯು ವರ್ಷದಿಂದ ವರ್ಷಕ್ಕೆ 10.39 ಶೇಕಡಾ ಬೆಳವಣಿಗೆ ದಾಖಲಿಸಿದೆ. ಆದರೂ ಈ ಅಂಕಿ - ಅಂಶವು ಅಕ್ಟೋಬರ್ 2024 ರಲ್ಲಿ ಕಂಪನಿಯ ಮಾರಾಟ ಸಂಖ್ಯೆಗಳಿಗಿಂತ ತುಂಬಾ ಕಡಿಮೆಯಾಗಿದೆ.
ನವೆಂಬರ್ 2024 ರಲ್ಲಿ ಮಾರುತಿಯ ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು 1,41,312 ಯುನಿಟ್‌ಗಳಷ್ಟಿದೆ. ಇದು ನವೆಂಬರ್ 2023 ರ ಮಾರಾಟದ ಅಂಕಿ - ಅಂಶಕ್ಕಿಂತ ಶೇಕಡಾ 5.33 ರಷ್ಟು ಹೆಚ್ಚಾಗಿದೆ. ಕಂಪನಿಯು ತನ್ನ ಜಾಗತಿಕ ಮೈತ್ರಿಯ ಭಾಗವಾಗಿ ಟೊಯೋಟಾಗೆ 8,660 ಯುನಿಟ್‌ಗಳನ್ನು ಮಾರಾಟ ಮಾಡಿತು. ಕಳೆದ ವರ್ಷದ ಇದೇ ತಿಂಗಳ ಅವಧಿಯಲ್ಲಿ 22,950 ಯುನಿಟ್‌ಗಳಿಗೆ ಹೋಲಿಸಿದರೆ 28,633 ಯುನಿಟ್‌ಗಳನ್ನು ರಫ್ತು ಮಾಡಿದೆ.
ಟಾಟಾ ಮೋಟಾರ್ಸ್:ನವೆಂಬರ್ 2024 ರಲ್ಲಿ ಟಾಟಾ ಮೋಟಾರ್ಸ್‌ನ ಒಟ್ಟು ಪ್ರಯಾಣಿಕ ವಾಹನ ಮಾರಾಟವು 47,117 ಯುನಿಟ್‌ಗಳಷ್ಟಿತ್ತು. ಇದು 2023 ರಲ್ಲಿ ಅದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕೇವಲ 2 ಪ್ರತಿಶತದಷ್ಟು ಹೆಚ್ಚಳ ಹೊಂದಿದೆ. ಆದರೂ ಈ ಮಾರಾಟದ ಅಂಕಿ - ಅಂಶವು ಅಕ್ಟೋಬರ್ 2024 ರಲ್ಲಿ ಕಂಪನಿಯ ಮಾರಾಟಕ್ಕಿಂತ 2.69 ಶೇಕಡಾ ಕಡಿಮೆಯಾಗಿದೆ.
ಟಾಟಾ ಮೋಟಾರ್ಸ್‌ನ ಮಾರಾಟದಲ್ಲಿ ಒಂದು ಧನಾತ್ಮಕ ಅಂಶ ಎಂದರೆ ಅದರ ಎಲ್ಲ ಎಲೆಕ್ಟ್ರಿಕ್ ಪ್ರಯಾಣಿಕ ವಾಹನ ಶ್ರೇಣಿಯ ಮಾರಾಟವು ಈ ತಿಂಗಳು ಶೇಕಡಾ 9 ರಷ್ಟು ಯುನಿಟ್‌ಗಳ ಏರಿಕೆ ಕಂಡಿದೆ. ಅಕ್ಟೋಬರ್ 2023 ರಲ್ಲಿ 74,172 ಯುನಿಟ್‌ಗಳಿಗೆ ಹೋಲಿಸಿದರೆ ಕಂಪನಿಯ (ವಾಣಿಜ್ಯ ವ್ಯಾಪಾರ ಸೇರಿದಂತೆ) ಮಾರಾಟವು ನವೆಂಬರ್ 2024 ರಲ್ಲಿ 74,753 ಯುನಿಟ್‌ಗಳಷ್ಟಿತ್ತು.
ಹುಂಡೈ ಇಂಡಿಯಾ:ಹ್ಯುಂಡೈ ಇಂಡಿಯಾದ ಕುರಿತು ಮಾತನಾಡುವುದಾದರೆ, ಕಂಪನಿಯು ವರ್ಷದಿಂದ ವರ್ಷಕ್ಕೆ 6.9 ಪ್ರತಿಶತದಷ್ಟು ಕುಸಿತವನ್ನು ದಾಖಲಿಸಿದ್ದರಿಂದ, ನವೆಂಬರ್ 2024 ರಲ್ಲಿ ಕಂಪನಿಯ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ. ಈ ತಿಂಗಳು ಭಾರತದಲ್ಲಿ ಕೊರಿಯನ್ ಕಾರು ತಯಾರಕರ ಒಟ್ಟು ಮಾರಾಟವು 61,252 ಯುನಿಟ್‌ಗಳಷ್ಟಿದೆ. ಇದು ನವೆಂಬರ್ 2023 ರಲ್ಲಿ 65,801 ಯುನಿಟ್‌ಗಳಷ್ಟಿತ್ತು.