Australia Bans Social Media For Kids:16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಬಳಸುವುದನ್ನು ನಿಷೇಧಿಸುವ ಐತಿಹಾಸಿಕ ಕಾನೂನನ್ನು ಆಸ್ಟ್ರೇಲಿಯಾ ಅನುಮೋದಿಸಿದೆ. ಇದರೊಂದಿಗೆ ಇಂತಹ ನಿರ್ಬಂಧಗಳನ್ನು ವಿಧಿಸಿದ ಜಗತ್ತಿನ ಮೊದಲ ದೇಶವಾಗಿದೆ. ಈ ನಿಯಮವನ್ನು ಪಾಲಿಸದ ಕಂಪನಿಗಳಿಗೆ 32 ಮಿಲಿಯನ್ ಡಾಲರ್ (ಭಾರತದ ರೂಪಾಯಿಗಳಲ್ಲಿ ಸುಮಾರು 270 ಕೋಟಿ ರೂ)ಗೂ ಅಧಿಕ ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿದೆ.
ಪ್ರಧಾನಿ ಆಂಥೋನಿ ಅಲ್ಬನೀಸ್ ನೇತೃತ್ವದ ಆಸ್ಟ್ರೇಲಿಯಾ ಸರ್ಕಾರ ಈ ಕಾನೂನನ್ನು ಅಂಗೀಕರಿಸಿತು. ಹೊಸ ಕಾನೂನಿನಲ್ಲಿ ಸಾಮಾಜಿಕ ಜಾಲತಾಣ ಬಳಕೆದಾರರ ಕನಿಷ್ಠ ವಯೋಮಿತಿಯನ್ನು 16 ವರ್ಷಕ್ಕೆ ನಿಗದಿಪಡಿಸಲಾಗಿದೆ. ಬುಧವಾರ ಆಸ್ಟ್ರೇಲಿಯಾ ಸಂಸತ್ತಿನ ಕೆಳಮನೆ ಮಸೂದೆಯನ್ನು ಅಂಗೀಕರಿಸಿತ್ತು. ಇದಕ್ಕೆ ಗುರುವಾರ ಸೆನೆಟ್‌ನಲ್ಲೂ ಬೆಂಬಲ ದೊರೆಯಿತು.
ಯುವಜನರು, ಪೋಷಕರು, ಶಿಕ್ಷಣ ತಜ್ಞರು ಮತ್ತು ಮಕ್ಕಳ ಅಭಿವೃದ್ಧಿ ತಜ್ಞರು ಹಾಗೂ ಸಮುದಾಯ, ಉದ್ಯಮ ಮತ್ತು ನಾಗರಿಕ ಸಂಸ್ಥೆಗಳೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಸಂವಹನ ಖಾತೆ ಸಚಿವ ಮಿಚೆಲ್ ರೋಲ್ಯಾಂಡ್ ಹೇಳಿದ್ದಾರೆ.
ಈ ಕುರಿತು ಪ್ರಧಾನಿ ಅಲ್ಬನೀಸ್ ಮಾತನಾಡಿ, "16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಾಮಾಜಿಕ ಜಾಲತಾಣ ಖಾತೆ ರಚಿಸುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನೀಡಲಾಗಿದೆ. ವಯಸ್ಸಿನ ಅವಶ್ಯಕತೆಗಳನ್ನು ಜಾರಿಗೊಳಿಸಲು ವಿಫಲವಾದರೆ 49.5 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ವರೆಗೂ ದಂಡ ವಿಧಿಸಬಹುದು" ಎಂದು ತಿಳಿಸಿದರು.