ನವದೆಹಲಿ: ಭಾರತದ 'ಸ್ಟಾರ್ಟ್ ಅಪ್ ಮಹಾಕುಂಭ' ಸಮಾವೇಶವು ಮಾರ್ಚ್ 18ರಿಂದ 20ರವರೆಗೆ ದೆಹಲಿಯ ಭಾರತ್ ಮಂಟಪಂ ಮತ್ತು ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ಐಟಿಪಿಒ)ನಲ್ಲಿ ನಡೆಯಲಿದೆ. 'ಸ್ಟಾರ್ಟ್ ಅಪ್ ಮಹಾಕುಂಭ'ದಲ್ಲಿ 1,000ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು, 1,000ಕ್ಕೂ ಹೆಚ್ಚು ಹೂಡಿಕೆದಾರರು, 5,000 ಭವಿಷ್ಯದ ಉದ್ಯಮಿಗಳು ಮತ್ತು 40,000 ಉದ್ಯಮ ವಲಯದ ಸಂದರ್ಶಕರು ಭಾಗವಹಿಸಲಿದ್ದಾರೆ.
ಸಮಾವೇಶದ ಅಂಗವಾಗಿ ನಾಸ್ಕಾಮ್ ಪೆವಿಲಿಯನ್ನಲ್ಲಿ 34ಕ್ಕೂ ಹೆಚ್ಚು ಡೀಪ್-ಟೆಕ್ ಸ್ಟಾರ್ಟ್ಅಪ್ಗಳು ತಮ್ಮ ನವೀನ ಆವಿಷ್ಕಾರಗಳನ್ನು ಪ್ರದರ್ಶಿಸಲಿವೆ. ನಾಸ್ಕಾಮ್ ಪೆವಿಲಿಯನ್ ಇದು ಭಾರತವನ್ನು ಪರಿವರ್ತಿಸುತ್ತಿರುವ ಮತ್ತು ವಿಶ್ವದ ವಿವಿಧ ಕ್ಷೇತ್ರಗಳಲ್ಲಿ ಉದ್ಯಮ ಸಾಮರ್ಥ್ಯಗಳನ್ನು ರೂಪಿಸುತ್ತಿರುವ ಆಳವಾದ ತಂತ್ರಜ್ಞಾನ ಆವಿಷ್ಕಾರಗಳ ಬಗ್ಗೆ ಒಳನೋಟದ ಚರ್ಚಾ ವೇದಿಕೆಯಾಗಲಿದೆ.
ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಲು ಈ ಕಾರ್ಯಕ್ರಮದಲ್ಲಿ ಹಲವಾರು ಉನ್ನತ ಮಹಿಳಾ ಸ್ಟಾರ್ಟಪ್ ನಾಯಕರು ಕೂಡ ಭಾಗವಹಿಸುತ್ತಿದ್ದಾರೆ.
"ಸ್ಟಾರ್ಟ್ಅಪ್ ಮಹಾಕುಂಭದಲ್ಲಿ ನಾವು ಕೇವಲ ಸ್ಟಾರ್ಟ್ಅಪ್ಗಳನ್ನು ಪ್ರದರ್ಶಿಸುತ್ತಿಲ್ಲ. ಭಾರತೀಯ ಉದ್ಯಮಶೀಲತೆಯ ಜಾಗತಿಕ ನಿರೂಪಣೆಯನ್ನು ಮುಂದಕ್ಕೆ ಕೊಂಡೊಯ್ಯುವ ಮೂಲಕ ಮಹಿಳೆಯರು ದೃಢತ್ವ ಮತ್ತು ಸೃಜನಶೀಲತೆಯಿಂದ ಮುನ್ನಡೆಸುವ ಪರಿಸರ ವ್ಯವಸ್ಥೆಯನ್ನು ನಾವು ರೂಪಿಸುತ್ತಿದ್ದೇವೆ" ಎಂದು ನಾಸ್ಕಾಮ್ ಅಧ್ಯಕ್ಷ ದೇಬ್ ಜಾನಿ ಘೋಷ್ ಹೇಳಿದ್ದಾರೆ.