Fraud Calls Blocked:ಅಮಾಯಕರ ಹಣ ಕಬಳಿಸುವ ಸೈಬರ್ ಅಪರಾಧಿಗಳಿಗೆ ಸ್ಪ್ಯಾಮ್ ಟ್ರ್ಯಾಕಿಂಗ್ ಸಿಸ್ಟಮ್ ಚಳ್ಳೆಹಣ್ಣು ತಿನ್ನಿಸುತ್ತಿದೆ. ಈ ಸಾಫ್ಟ್ವೇರ್ನಿಂದ ಅಂದಾಜು ಎರಡೂವರೆ ಸಾವಿರ ಕೋಟಿ ರೂ ಹಣವನ್ನು ರಕ್ಷಣೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರ ತಂದಿರುವ 'ಸ್ಪ್ಯಾಮ್ ಟ್ರ್ಯಾಕಿಂಗ್ ಸಿಸ್ಟಮ್' ಮೂಲಕ ಪ್ರತಿದಿನ 1.35 ಕೋಟಿ ವಂಚನೆ ಕರೆಗಳನ್ನು ನಿರ್ಬಂಧಿಸಲು ಸಾಧ್ಯವಾಗುತ್ತಿದೆ. ಇದರೊಂದಿಗೆ ಇದುವರೆಗೆ 2,500 ಕೋಟಿ ರೂ ಮೌಲ್ಯದ ಆಸ್ತಿಯನ್ನು ಸೈಬರ್ ಅಪರಾಧಿಗಳಿಂದ ಉಳಿಸಲಾಗಿದೆ. ದೇಶದ ಹೊರಗಿನ ಸೇವೆಗಳಿಂದ ಹೆಚ್ಚಿನ ಸ್ಪ್ಯಾಮ್ ಕರೆಗಳು ಬರುತ್ತಿದ್ದು, ಈ ತಾಂತ್ರಿಕ ವ್ಯವಸ್ಥೆ ಅಂತಹ ಮೋಸದ ಕರೆಗಳನ್ನು ನಿರ್ಬಂಧಿಸುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಸಂವಹನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.
ಸಂಚಾರ ಸಾಥಿ ಮತ್ತು ಚಕ್ಷು ಪೋರ್ಟಲ್ ಮೂಲಕ ದೂರಸಂಪರ್ಕ ಇಲಾಖೆ (ಡಿಒಟಿ) ವಂಚನೆ ಪತ್ತೆ ಜಾಲ 2,500 ಕೋಟಿ ರೂ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿದೆ. ಈ ವ್ಯವಸ್ಥೆಗಳೊಂದಿಗೆ ಸುಮಾರು 2.9 ಲಕ್ಷ ನಕಲಿ ಫೋನ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಮತ್ತು ಸಂದೇಶಗಳನ್ನು ಕಳುಹಿಸಲು ಬಳಸುವ ಸುಮಾರು 1.8 ಮಿಲಿಯನ್ ಹೆಡರ್‌ಗಳನ್ನು ನಿರ್ಬಂಧಿಸಬಹುದು ಎಂದು ಅವರು ತಿಳಿಸಿದರು.
ಇವುಗಳ ಹೊರತಾಗಿ ಸರ್ಕಾರ ಮತ್ತೊಂದು ಹೊಸ ಸಾಫ್ಟ್‌ವೇರ್ ಸಿದ್ಧಪಡಿಸಿದ್ದು, ಕಾನೂನು ಜಾರಿ ಸಂಸ್ಥೆಗಳೊಂದಿಗೆ ಬ್ಯಾಂಕ್‌ಗಳನ್ನು ಲಿಂಕ್ ಮಾಡಲಾಗುತ್ತಿದೆ. ಇದರಲ್ಲಿ 520 ಏಜೆನ್ಸಿಗಳನ್ನು ಸೇರಿಸಲಾಗಿದೆ ಎಂದು ಸಚಿವರು ಹೇಳಿದರು. ತಮ್ಮ ಆದ್ಯತೆಗಳನ್ನು ವಿವರಿಸುತ್ತಾ, ಮುಂದಿನ ವರ್ಷ ಮೇ ವೇಳೆಗೆ ಎಲ್ಲರಿಗೂ ಬಿಎಸ್‌ಎನ್‌ಎಲ್ 5G ಸೇವೆ ಮತ್ತು ಏಪ್ರಿಲ್ ವೇಳೆಗೆ 4G ಸೇವೆಗಳು ಲಭ್ಯವಾಗುವಂತೆ ಮಾಡುವುದು ನಮ್ಮ ಮತ್ತೊಂದು ಪ್ರಮುಖ ಗುರಿ ಎಂದು ಸಿಂಧಿಯಾ ತಿಳಿಸಿದ್ದಾರೆ.