ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಪ್ರತ್ಯೇಕ ಘಟನೆ: ಬೈಕ್​ ಉರುಳಿ ಬಿದ್ದು ಯುವಕ ಮೃತ, ಗೃಹಿಣಿ ಅನುಮಾನಾಸ್ಪದ ಸಾವು - Homemaker died suspiciously - HOMEMAKER DIED SUSPICIOUSLY

ಹಳೆ ದ್ವೇಷ ಹಿನ್ನೆಲೆಯಲ್ಲಿ ವ್ಯಕ್ತಿಗೆ ಕಲ್ಲು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Aug 17, 2024, 7:39 AM IST

ಮೈಸೂರು: ಅತೀ ವೇಗದ ಚಾಲನೆಯಿಂದ ಬೈಕ್​ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರಣ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ದಾರಿಪುರ ಗ್ರಾಮದ ಬಳಿ ಶುಕ್ರವಾರ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕು ಚನ್ನಕೆರೆ ಕಾವಲ್ ನಿವಾಸಿ ಅಭಿಷೇಕ್ (21) ಮೃತಪಟ್ಟವರು.

ಗಾರೆ ಕೆಲಸ ವಾಡುತ್ತಿದ್ದ ಅಭಿಷೇಕ್, ಆ.14ರಂದು ಟಿ.ಕಾಟೂರಿನಲ್ಲಿರುವ ತನ್ನ ಸ್ನೇಹಿತನ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ ಶುಕ್ರವಾರ ರಾತ್ರಿ 9 ಗಂಟೆ ವೇಳೆಗೆ ಬೈಕ್​ನಲ್ಲಿ ಊರಿಗೆ ವಾಪಸ್ ಬರುತ್ತಿದ್ದರು. ಈ ವೇಳೆ ದಾರಿಪುರ ಬಳಿ ಇದ್ದ ರಸ್ತೆ ಡುಬ್ಬದ ಮೇಲೆ ವಾಹನವನ್ನು ವೇಗವಾಗಿ ಹತ್ತಿಸಿದ್ದು, ನಿಯಂತ್ರಣಕ್ಕೆ ಸಿಗದ ಬೈಕ್​ ಉರುಳಿ ಬಿದ್ದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಜುಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಯುವಕನ ಕೊಲೆ:ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕರ ಗುಂಪೊಂದು ವ್ಯಕ್ತಿಗೆ ಕಲ್ಲು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಮೈಸೂರಿನ ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೂಲತ ಶ್ರೀರಂಗಪಟ್ಟಣದ ಕೂಡಲುಕುಪ್ಪೆ ಗ್ರಾಮದ ನಿವಾಸಿ ಹಾಗೂ ಸದ್ಯ ಕಡಕೊಳದಲ್ಲಿ ವಾಸಿವಿದ್ದ ಲೋಕೇಶ್ (23) ಕೊಲೆಯಾದ ವ್ಯಕ್ತಿ. ಈ ಸಂಬಂಧ ಸಂತೋಷ್, ಪುನೀತ್‌ರಾಜ್, ಸುಖಾಂತ್, ಪ್ರಜ್ವಲ್, ಸಾಗರ್, ರಂಗಸ್ವಾಮಿ ಎಂಬವರ ವಿರುದ್ಧ ಕೊಲೆ ಆರೋಪದ ಮೇಲೆ ದೂರು ದಾಖಲಾಗಿದೆ.

ಕಡಕೊಳ ಬಳಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಲೋಕೇಶ್ ಈ ಹಿಂದೆ ದಡದಹಳ್ಳಿ ಗ್ರಾಮದ ಕೆಲ ಯುವಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಆ ಬಗ್ಗೆ ರಾಜಿ ಪಂಚಾಯಿತಿ ನಡೆಸಲಾಗಿತ್ತು. ಆದರೆ ಆ.14ರ ರಾತ್ರಿ ಲೋಕೇಶ್​ ತನ್ನ ಬೈಕ್‌ನಲ್ಲಿ ದಡದಹಳ್ಳಿ ಬಳಿ ಬರುತ್ತಿದ್ದ ವೇಳೆ ಎದುರಾದ ಯುವಕರು, ಆತನ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಕೂಡಲೇ ಸಾರ್ವಜನಿಕರು ಆತನನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಿ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಗೃಹಿಣಿ ಅನುಮಾನಾಸ್ಪದ ಸಾವು: ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಆಕೆಯ ಗಂಡನೇ ಕೊಲೆಗೈದಿದ್ದಾನೆ ಎಂದು ಮೃತ ಮಹಿಳೆಯ ಪೋಷಕರು ದೂರು ನೀಡಿದ್ದಾರೆ. ರಾಮಕೃಷ್ಣನಗರ ನಿವಾಸಿ ರೂಪ (32) ಮೃತಪಟ್ಟವರು.

ತಾಲೂಕಿನ ದೊಡ್ಡಹುಂಡಿ ಗ್ರಾಮದ ನಿವಾಸಿ ರೂಪ ಹಾಗೂ ಮಾರ್ಬಳ್ಳಿ ಗ್ರಾಮದ ಚಿಕ್ಕಣ್ಣ ಅವರಿಗೆ ಕೆಲ ವರ್ಷಗಳ‌ ಹಿಂದೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 'ಆರಂಭದಲ್ಲಿ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಚಿಕ್ಕಣ್ಣ ನಂತರ ಮದ್ಯ ಸೇವನೆ ಚಟಕ್ಕೆ ಬಿದ್ದು, ಪ್ರತಿದಿನ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ. ಈ ಸಂಬಂಧ ಸಾಕಷ್ಟು ರಾಜಿ ಪಂಚಾಯಿತಿ ನಡೆಸಲಾಗಿತ್ತು. ಆ.13ರಂದು ನನ್ನ ಭಾವ ಚಿಕ್ಕಣ್ಣ ಅಕ್ಕ ರೂಪಾಳನ್ನು ಹೊಡೆದು ಕೊಂದು ನೇಣು ಹಾಕಿದ್ದಾನೆ' ಎಂದು ಮೃತ ಮಹಿಳೆಯ ಸಹೋದರ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆನ್​ಲೈನ್ ವಂಚನೆ:‌ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಸೇರಿದಂತೆ ಇಬ್ಬರು ಆನ್‌ಲೈನ್ ವಂಚನೆಗೆ ಒಳಗಾಗಿದ್ದಾರೆ. ಮೊದಲ ಪ್ರಕರಣದಲ್ಲಿ ಯಾದವಗಿರಿ ನಿವಾಸಿಯೊಬ್ಬರು ಫೇಸ್‌ಬುಕ್ ಮೂಲಕ ಷೇರು ಮಾರುಕಟ್ಟೆ ಬಗ್ಗೆ ತಿಳಿದು, ವಂಚಕರ ವಾಟ್ಸ್ಯಾಪ್ ಗ್ರೂಪ್‌ಗೆ ಸೇರಿದ್ದರು. ಅಲ್ಲಿ ಟ್ರೇಡಿಂಗ್‌ನಲ್ಲಿ ಅಧಿಕ ಲಾಭದ ಆಸೆ ಹುಟ್ಟಿಸಿ, ಹಣ ಹೂಡಿಕೆ ಮಾಡುವಂತೆ ಖದೀಮರು ಹೇಳಿದ್ದರು. ಅವರ ಮಾತನ್ನು ನಂಬಿದ ವ್ಯಕ್ತಿ ಹಂತ-ಹಂತವಾಗಿ 59.90 ಲಕ್ಷ ರೂ. ಹಣವನ್ನು ಅವರ ಖಾತೆಗೆ ಹಾಕಿ ವಂಚನೆಗೆ ಒಳಗಾಗಿದ್ದಾರೆ.

ಎರಡನೇ ಪ್ರಕರಣದಲ್ಲಿ ಉದಯಗಿರಿ ನಿವಾಸಿಯೊಬ್ಬರು, ವಾಟ್ಸ್​ ಆ್ಯಪ್ ಮೂಲಕ ಬಂದ ಸಂದೇಶವನ್ನು ಗಮನಿಸಿ ಗ್ರೂಪ್‌ಗೆ ಸೇರಿದ್ದರು. ನಂತರ ಅಲ್ಲಿ ಹಣ ಹೂಡಿಕೆ ಮಾಡಲಾರಂಭಿಸಿದ್ದರು. ಆರಂಭದಲ್ಲಿ ಲಾಭ ಕಂಡುಬಂದಿತ್ತು. ನಂತರ ಕಂಪನಿಯ ವಂಚಕರು ಹೆಚ್ಚು ಹಣ ಹೂಡುವಂತೆ ಪ್ರೇರೇಪಿಸಿದ್ದರು. ಅವರ ಮಾತನ್ನು ನಂಬಿದ ವ್ಯಕ್ತಿ ಹಂತ-ಹಂತವಾಗಿ 22,83,088 ರೂ. ಹಣವನ್ನು ಅವರ ಖಾತೆಗೆ ಜಮೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ:ಶಮೀರ್ ಅಲಿ ಹತ್ಯೆ ಕೇಸ್: ನಾಲ್ವರ ಬಂಧನ, ಟಾರ್ಗೆಟ್ ಇಲ್ಯಾಸ್ ಕೊಲೆಗೆ ಪ್ರತೀಕಾರ - Shamir Ali Murder Case

ABOUT THE AUTHOR

...view details