ಬೆಂಗಳೂರು:ಹೊಸ ನಾಯಕರನ್ನು ಸೃಷ್ಟಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ನಲ್ಲಿ ಆಗಸ್ಟ್ 16ರಿಂದ ಸೆಪ್ಟೆಂಬರ್ 16ರ ವರೆಗೆ ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಆಂತರಿಕ ಚುನಾವಣೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಜುಲೈ 24ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಆಗಸ್ಟ್ 2ರ ವರೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ. ಆಗಸ್ಟ್ 3ರಿಂದ 8ರ ವರೆಗೆ ನಾಮಪತ್ರ ಪರಿಶೀಲನೆ, ಆಗಸ್ಟ್ 9ರಂದು ನಾಮಪತ್ರ ಅಂತಿಮ ಮಾಡಲಾಗುವುದು. ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆಯುವವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಬಳಿಕ ಮತಗಳ ಆಧಾರದ ಮೇಲೆ ನಂತರದ ಸ್ಥಾನ ಪಡೆಯುವರಿಗೆ ಇತರೆ ಸ್ಥಾನ ನೀಡಲಾಗುವುದು. ಈ ವೇಳೆ ಪಕ್ಷವು ಅಗ್ರ ಮೂರು ಸ್ಥಾನ ಪಡೆದವರ ಸಂದರ್ಶನವನ್ನು ಮಾಡಲಿದೆ ಎಂದರು.
ಸದಸ್ಯತ್ವ ನೋಂದಣಿಯನ್ನು ಆಗಸ್ಟ್ 16 ರಿಂದ ಸೆಪ್ಟೆಂಬರ್ 16ರ ವರೆಗೂ ನಡೆಯಲಿದೆ. ಆನ್ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬಹುದು. ಸದಸ್ಯತ್ವ ಪಡೆಯಲು 35 ವರ್ಷದೊಳಗಿನವರಾಗಿರಬೇಕು. ಸದಸ್ಯತ್ವ ನೋಂದಣಿ ಶುಲ್ಕ 50 ರೂಪಾಯಿ ಕಟ್ಟಬೇಕು ಸದಸ್ಯತ್ವ ಪಡೆದ ದಿನದಿಂದಲೇ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಗೆ ಮತದಾನ ಮಾಡಬಹುದು. ಓರ್ವ ಸದಸ್ಯ ಆರು ಮಂದಿ ಪದಾಧಿಕಾರಿಗಳಿಗೆ ಮತ ಹಾಕುವ ಅಧಿಕಾರವಿರುತ್ತದೆ ಎಂದು ಹೇಳಿದರು.
ಇಡೀ ದೇಶದಲ್ಲಿ ಪಂಚಾಯಿತಿಯಿಂದ ಸಂಸತ್ತಿನವರೆಗೂ ನಾಯಕರು ಇರಬೇಕು. ಅವರಿಗೆ ಜವಾಬ್ದಾರಿ ಇರಬೇಕು ಎಂದು ರಾಜೀವ್ ಗಾಂಧಿ ಅವರು ಒಂದು ಹೊಸ ಚಳವಳಿ ಆರಂಭಿಸಿದ್ದರು. ನಾನು ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷನಾಗಿದ್ದಾಗ ರಾಜೀವ್, ನಾಯಕರನ್ನು ಹುಟ್ಟುಹಾಕುವವನೇ ನಿಜವಾದ ನಾಯಕ ಎಂದು ಹೇಳಿದ್ದರು. ಅದೇ ರೀತಿ ರಾಹುಲ್ ಗಾಂಧಿ ಈಗ ಯುವ ನಾಯಕರನ್ನು ಸೃಷ್ಟಿ ಮಾಡಲು ಈ ಹೆಜ್ಜೆ ಇಟ್ಟಿದ್ದಾರೆ ಎಂದು ತಿಳಿಸಿದರು.