ಕೋಲಾರ: ಚುನಾವಣಾ ಬಾಂಡ್ ವಿವರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಗಡುವು ನೀಡಿದ್ದರೂ, ಬಿಡುಗಡೆಗೊಳಿಸದ ಎಸ್ಬಿಐ ಬ್ಯಾಂಕ್ ವಿರುದ್ಧ ಕೋಲಾರದ ಯುವ ಕಾಂಗ್ರೆಸ್ ಕಾರ್ಯಕರ್ತರು ಅಂತರಗಂಗೆ ರಸ್ತೆಯಲ್ಲಿರುವ ಬ್ಯಾಂಕ್ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು. ಎಸ್ಬಿಐ ಬ್ಯಾಂಕ್ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ಚುನಾವಣಾ ಬಾಂಡ್ ವಿವರ ಬಿಡುಗಡೆಗೆ ಒತ್ತಾಯಿಸಿ ಎಸ್ಬಿಐ ಬ್ಯಾಂಕ್ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಚುನಾವಣಾ ಬಾಂಡ್ಗಳ ವಿವರಗಳನ್ನು ಬಹಿರಂಗಪಡಿಸಲು ಹೆಚ್ಚಿನ ಸಮಯ ಕೋರಿ ಎಸ್ಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಇಂದೇ ಬಿಡುಗಡೆಗೊಳಿಸವಂತೆ ಸೂಚನೆ ನೀಡಿದೆ. ಈ ಹಿನ್ನೆಲೆ ಕೂಡಲೇ ಎಸ್ಬಿಐ ಬ್ಯಾಂಕ್ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಆಗ್ರಹ ಮಾಡಿದರು. ಇನ್ನು ಪ್ರತಿಭಟನೆಗೆ ಅನುಮತಿ ಪಡೆಯದ ಹಿನ್ನೆಲೆ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪ್ರತಿಭಟನೆ ಕೈಬಿಟ್ಟಿದ್ದು, ಗ್ರಾಹಕರ ವಹಿವಾಟಿಗೆ ಅನುಕೂಲ ಮಾಡಿ ಕೊಡಲಾಯಿತು.
ಕೋಲಾರ ಮಾತ್ರವಲ್ಲದೆ ಬೆಂಗಳೂರಿನ ಎಸ್ಬಿಐ ಬ್ಯಾಂಕ್ ಪ್ರಧಾನ ಕಚೇರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಮುತ್ತಿಗೆ ಹಾಕಿದರು. ನಿನ್ನೆ ಧಿಡೀರ್ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಚುನಾವಣಾ ಬಾಂಡ್ಗಳ ವಿವರವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಎಸ್ಬಿಐ ಬ್ಯಾಂಕ್ ಚುನಾವಣಾ ಬಾಂಡ್ ಮಾಹಿತಿ ಮುಚ್ಚಿಡುತ್ತಿದೆ. ಚುನಾವಣಾ ಬಾಂಡ್ಗಳ ವಿವರ ನೀಡುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕಾರ್ಯಕರ್ತರು ಬ್ಯಾಂಕ್ ಕಚೇರಿಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ಪ್ರಯತ್ನಿಸಿದರು. ಕಚೇರಿಯೊಳಗೆ ನುಗ್ಗಲು ಪ್ರಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆಹಿಡಿದ ಪೊಲೀಸರು, ಬ್ಯಾಂಕ್ ಎದುರು ಧರಣಿಗೆ ಅವಕಾಶ ನೀಡಲು ನಿರಾಕರಿಸಿದರು.
ಗಡುವು ವಿಸ್ತರಣೆ ಅರ್ಜಿ ವಜಾ: ಕೇಂದ್ರ ಸರ್ಕಾರ ತಂದಿದ್ದ ಚುನಾವಣಾ ಬಾಂಡ್ ಯೋಜನೆ ಅಸಾಂವಿಧಾನಿಕ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್, ಯೋಜನೆಯನ್ನು ರದ್ದು ಮಾಡಿ ಆದೇಶ ನೀಡಿತ್ತು. ಬಳಿಕ ಬ್ಯಾಂಕ್ನಿಂದ ಪಡೆಯಲಾದ ಬಾಂಡ್ಗಳ ವಿವರಗಳನ್ನು ನೀಡಲು ಎಸ್ಬಿಐಗೆ ಸುಪ್ರೀಂ ಕೋರ್ಟ್ ಮಾರ್ಚ್ 6ರವರೆಗೆ ಗಡುವು ನೀಡಿತ್ತು.
ಆದರೆ, ಎಸ್ಬಿಐ ಅಷ್ಟು ಸೀಮಿತ ಅವಧಿಯೊಳಗೆ ಪ್ರತಿ ಬಾಂಡ್ನ ಮಾಹಿತಿ ನೀಡಲು ಸಾಧ್ಯವಿಲ್ಲ. ಡೇಟಾ ಸಂಗ್ರಹಿಸುವ ಪ್ರಕ್ರಿಯೆಗೆ ಸಮಯ ಬೇಕು ಎಂದು ಚುನಾವಣಾ ಬಾಂಡ್ಗಳ ಸಂಪೂರ್ಣ ವಿವರವನ್ನು ಬಹಿರಂಗಪಡಿಸಲು ಜೂನ್ 30ರವರೆಗೆ ಸಮಯಾವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿತ್ತು. ಆದರೆ ಗಡುವು ವಿಸ್ತರಿಸುವಂತೆ ಕೋರಿ ಭಾರತೀಯ ಸ್ಟೇಟ್ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಮಾರ್ಚ್ 12ರಂದು ಕಚೇರಿ ವ್ಯವಹಾರದ ಅವಧಿ ಒಳಗಾಗಿ ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ:ಚುನಾವಣಾ ಬಾಂಡ್ ಮಾಹಿತಿ ನೀಡುವಂತೆ ಆಗ್ರಹಿಸಿ ಎಸ್ಬಿಐ ಬ್ಯಾಂಕ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ