ಕರ್ನಾಟಕ

karnataka

ETV Bharat / state

ಸಾಲದ ಹಣ ಮರಳಿಸುವಂತೆ ಅವಾಚ್ಯವಾಗಿ ನಿಂದಿಸಿದ್ದಕ್ಕೆ ಸ್ನೇಹಿತನ ಹತ್ಯೆ: ಆರೋಪಿಯ ಬಂಧನ - Friend Murder Case - FRIEND MURDER CASE

ಯುವಕನೊಬ್ಬ ತನಗೆ ಸಾಲ ನೀಡಿದ್ದ ಗೆಳೆಯನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Murder Case
ದಿಲೀಪ್, ವಿಠಲ್ ಆರ್. (ETV Bharat)

By ETV Bharat Karnataka Team

Published : May 11, 2024, 6:11 PM IST

ಡಿಸಿಪಿ ಸೈದುಲು ಅಡಾವತ್ (ETV Bharat)

ಬೆಂಗಳೂರು:ಕೊಟ್ಟ ಸಾಲ ವಾಪಸ್ ಕೇಳಿದ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಶ್ರೀರಾಂಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಲ್.ಎನ್.ಪುರದ ದಿಲೀಪ್ (34) ಎಂಬಾತ ಕೊಲೆಗೀಡಾಗಿದ್ದು, ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದ ಆರೋಪಿ ವಿಠಲ್ ಆರ್. (45) ಎಂಬಾತನನ್ನು ಬಂಧಿಸಲಾಗಿದೆ.

ಮೇ 1ರಂದು ಓಕಳಿಪುರಂ ಅಂಡರ್ ಪಾಸ್ ಸಮೀಪದಲ್ಲಿರುವ ರೈಲ್ವೆ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಬೈಕ್ ಮೆಕ್ಯಾನಿಕ್ ಆಗಿದ್ದ ದಿಲೀಪ್, ತನ್ನ ಸ್ನೇಹಿತ ವಿಠಲ್​​ಗೆ 20 ಸಾವಿರ ರೂ. ಕೈ ಸಾಲ ನೀಡಿದ್ದ. ಹಣ ವಾಪಸ್ ಕೊಡುವಂತೆ ಸಾಕಷ್ಟು ಬಾರಿ ಕೇಳಿ ಬೇಸತ್ತಿದ್ದ ದಿಲೀಪ್, ಇತ್ತೀಚೆಗೆ ಅವಾಚ್ಯವಾಗಿ ವಿಠಲ್​ನನ್ನು ನಿಂದಿಸಿದ್ದ.

ಇದರಿಂದ ಅವಮಾನಿತನಾಗಿ ಕೋಪಗೊಂಡ ವಿಠಲ್, ಏಪ್ರಿಲ್ 28 ರಂದು ರಾತ್ರಿ ಹಣ ಕೊಡುವುದಾಗಿ ದಿಲೀಪ್​ನನ್ನು ಓಕಳಿಪುರಂ ಅಂಡರ್ ಪಾಸ್ ಸಮೀಪದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದ. ಬಳಿಕ ಆತನ ಕಣ್ಣಿಗೆ ಖಾರದ ಪುಡಿ ಎರಚಿ, ತಾನು ತಂದಿದ್ದ ಚಾಕುವಿನಿಂದ ಕುತ್ತಿಗೆ ಹಾಗೂ ಎದೆಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂರು ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದ ಶ್ರೀರಾಂಪುರ ಠಾಣೆ ಪೊಲೀಸರು, ಮೃತನ ವಿವರ ಲಭ್ಯವಾಗದಿದ್ದರಿಂದ ಪ್ರಕಟಣೆ ಹೊರಡಿಸಿದ್ದರು.

ಪ್ರಕಟಣೆ ಗಮನಿಸಿದ ದಿಲೀಪ್​ನ ಸಹೋದರನ ಗೆಳೆಯ ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದ. ಮಾಹಿತಿ ಆಧರಿಸಿ ದಿಲೀಪ್​ನ ಸಹೋದರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು. ಅದರ ಅನ್ವಯ ಮೃತನ ಸ್ನೇಹಿತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಅಸಲಿ ಸಂಗತಿ ಬಯಲಾಗಿದೆ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ವಿವರಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ತೃತೀಯ ಲಿಂಗಿಯನ್ನು ಹತ್ಯೆ ಮಾಡಿದ್ದ ಮಹಿಳೆ ಬಂಧನ - Transgender Murder

ABOUT THE AUTHOR

...view details