ಬೆಂಗಳೂರು: ನಿಮ್ಮದು ಕ್ಯಾಬಿನೆಟ್ ಆಫ್ ಕರ್ನಾಟಕ ಅಲ್ಲ, ಅದು ಕ್ಯಾಬಿನೆಟ್ ಆಫ್ ಕಾನ್ಸ್ಪಿರೆಸಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಎಕ್ಸ್ ಪೋಸ್ಟ್ ಮೂಲಕ ಟೀಕೆ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ ಅವರು, ಕ್ಷಣಕ್ಕೊಂದು ಮಾತು, ಘಳಿಗೆಗೊಂದು ಹೇಳಿಕೆ! ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಯ ಮೇಲೆ ನೀವು ಕೂತಿದ್ದಿರೋ ಅಥವಾ ಊಸರವಳ್ಳಿ ಏನಾದರೂ ಕೂತಿದೆಯೋ? ನನಗಂತೂ ಅನುಮಾನ. ಇಷ್ಟು ಬಣ್ಣಗೇಡಿ ವರ್ತನೆಯನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ ನಾನು. ಅತೀವ ವಿಷಾದ ಮತ್ತು ನೋವಿನಿಂದಲೇ ಈ ಮಾತು ಹೇಳುತ್ತಿದ್ದೇನೆ ಸಿದ್ದರಾಮಯ್ಯನವರೇ.
ಮೈಸೂರಿನಲ್ಲಿ ಇವತ್ತು ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೀರಿ. "ನೊಂದ ಮಹಿಳೆಯರ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹಂಚುವುದು, ಹರಡುವುದು ಮುಖ್ಯವಲ್ಲ. ಅದು ಅಪರಾಧವೂ ಅಲ್ಲ. ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡಿದ್ದು, ದೊಡ್ಡ ಅಪರಾಧ ಎನ್ನುವುದು ಯಾವ ಸೆಕ್ಷನ್‌ನಲ್ಲಿದೆ? ಅದನ್ನು ಯಾವ ಸೆಕ್ಷನ್‌ನಲ್ಲಿ ಉಲ್ಲೇಖಿಸಿದ್ದಾರೆ? ಕುಮಾರಸ್ವಾಮಿ ಪ್ರಕಾರ ಯಾವುದಾದರೂ ಹೊಸ ಸೆಕ್ಷನ್ ಇದ್ದರೆ ಹೇಳಲಿ ಎಂದು ನನಗೆ ಪ್ರಶ್ನೆ ಮಾಡಿದ್ದೀರಿ ಎಂದಿದ್ದಾರೆ.
ನಿಜ, ನೀವು ಸ್ವಯಂಘೋಷಿತ ಸಂವಿಧಾನ ತಜ್ಞರು. ಪ್ರ(ಕು)ಖ್ಯಾತ ಮಾಜಿ ವಕೀಲರು. ಹಾಲಿ ಮುಖ್ಯಮಂತ್ರಿಗಳು. ಆದರೂ ನಿಮ್ಮ ಪ್ರಶ್ನೆಗೆ ಉತ್ತರ ಕೊಡುವುದು ನನ್ನ ಧರ್ಮ. ಆದರೆ ನಿಮಗೆ ಈ ಪರಿ ಅಜ್ಞಾನವೇ ಎನ್ನುವುದು ನನಗೆ ಸೋಜಿಗ. ಮಾತೆತ್ತಿದರೆ, 'ನಾನು ಲಾಯರ್ ಗಿರಿ ಮಾಡ್ತಾ ಇದ್ದೆ. ಸುಮ್ಕೆ ಕೂತ್ಕಳಿ' ಎಂದು ಎಲ್ಲರ ಬಾಯಿ ಮುಚ್ಚಿಸುತ್ತಿದ್ದ ನೀವು, ಈಗ ನೀವೇ ಬಾಯಿ ಮುಚ್ಚಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದೇ ಕಾರಣಕ್ಕೆ ನಾನು ನಿಮ್ಮನ್ನು ಅತ್ಯಂತ ವಿನಮ್ರತೆಯಿಂದ ವಿನಂತಿ ಮಾಡಿಕೊಂಡಿದ್ದು, 'ದಯಮಾಡಿ ವಕೀಲಿಕೆ ಮಾಡಬೇಡಿ' ಎಂದು. ಕಾನೂನಿನ ಬಗ್ಗೆ ಸಾಸಿವೆ ಕಾಳಿನಷ್ಟು ತಿಳಿವಳಿಕೆ ಇಲ್ಲದವರೊಬ್ಬರು 'ನಾನೂ ವಕೀಲ ನಾನೂ ವಕೀಲಿಕೆ ಮಾಡ್ತಾ ಇದ್ದೆ' ಎಂದು ಹೇಳಿಕೊಳ್ಳುವುದು ಗೌರವಾನ್ವಿತ ವಕೀಲ ಸಮುದಾಯಕ್ಕೆ ಮಾಡುವ ಅಪಚಾರ. ತಮಗೆ ಇನ್ನಾದರೂ ಇರಲಿ ಶಿಷ್ಟಾಚಾರ ಎಂದು ವಾಗ್ದಾಳಿ ನಡೆಸಿದ್ದಾರೆ.