ಹಾವೇರಿ:ತಮ್ಮನೇ ಅಣ್ಣನನ್ನು ಕೊಲೆಗೈದು ಹೂತು ಹಾಕಿದ ಘಟನೆ ರಾಣೆಬೆನ್ನೂರು ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಮೇಶ್(32) ಕೊಲೆಯಾದ ಅಣ್ಣ. ಪ್ರಸಾದ್(30) ಕೊಲೆಗೈದ ತಮ್ಮ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಯಲ್ಲಮ್ಮ ಮತ್ತು ನಾಗರಾಜ ದಂಪತಿಗಳಾದ ಇವರು ಕಳ್ಳತನವನ್ನೇ ವೃತ್ತಿಯಾಗಿ ಮಾಡಿಕೊಂಡು ಹಾವೇರಿ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೃತ್ಯ ಎಸಗುತ್ತಿದ್ದರು. ಪ್ರಕರಣವೊಂದರಲ್ಲಿ ಚಿತ್ರದುರ್ಗದ ಜೈಲು ಸೇರಿದ್ದಾಗ ಜೈಲರ್ ಶ್ರೀಕಾಂತ ಎಂಬಾತನ ಪರಿಚಯವಾಗಿತ್ತು. ಕಾರಣಾಂತರದಿಂದ ಶ್ರೀಕಾಂತ ಕೆಲಸದಿಂದ ಅಮಾನತಾದ ನಂತರ ಈ ಇಬ್ಬರು ಸಹೋದರರಿಗೆ ಕಳ್ಳತನದ ಮಾರ್ಗ ಹೇಳಿಕೊಡುತ್ತಿದ್ದ. ಆತನ ಮಾರ್ಗದರ್ಶನದಂತೆ ರಮೇಶ್ ಮತ್ತು ಪ್ರಸಾದ್ ವಿವಿಧೆಡೆ ಕಳ್ಳತನ ಮಾಡುತ್ತಿದ್ದರು.
ಸಹೋದರಿಬ್ಬರು ತಮ್ಮ ಪೋಷಕರನ್ನು ಹಿರಿಯೂರಿನಿಂದ ಕರೆಸಿಕೊಂಡು ರಾಣೆಬೆನ್ನೂರಿನಲ್ಲಿ ನೆಲೆಸಿದ್ದರು. 2023ರ ಮೇ 10ರಂದು ಹುಣಸಿಕಟ್ಟಿ ರಸ್ತೆಯಲ್ಲಿರುವ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಸಹೋದರರು, ಕದ್ದ ಮಾಲನ್ನು ಪಾಲು ಮಾಡಿಕೊಳ್ಳುವಾಗ ಗಲಾಟೆ ಮಾಡಿಕೊಂಡಿದ್ದರು. ಕುಡಿದ ಮತ್ತಿನಲ್ಲಿದ್ದ ತಮ್ಮ ಪ್ರಸಾದ್ ತನ್ನ ಸ್ನೇಹಿತ ಶ್ರೀಕಾಂತನ ಸಹಕಾರದಿಂದ ಅಣ್ಣ ರಮೇಶನನ್ನು ಹತ್ಯೆಗೈದಿದ್ದ. ಬಳಿಕ ಅಲ್ಲೇ ಇದ್ದ ನೀರಿನ ಹೊಂಡದ ಪಕ್ಕದಲ್ಲಿ ಮೃತದೇಹವನ್ನು ಹೂತುಹಾಕಿ ಆರೋಪಿಗಳು ಪರಾರಿಯಾಗಿದ್ದರು.
ಕಳ್ಳತನ ಪ್ರಕರಣ ಸಂಬಂಧ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪೂಲೀಸರು ಕಳೆದ ತಿಂಗಳು ಅಂದರೆ ಸೆ.9ರಂದು ಪ್ರಸಾದ್, ಪ್ರದೀಪ್ ಮತ್ತು ಶ್ರೀಕಾಂತ್ನನ್ನು ಬಂಧಿಸಿದ್ದಾರೆ. ಇವರು ಮಾಡಿದ ಕಳ್ಳತನದ ಪ್ರಕರಣಗಳ ಕುರಿತಂತೆ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಪ್ರಸಾದ್ ತನ್ನ ಅಣ್ಣ ರಮೇಶನನ್ನು ಶ್ರೀಕಾಂತ್ನ ಸಹಾಯದಿಂದ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.