ಬೆಂಗಳೂರು: ತಂಗಿಯನ್ನು ಚುಡಾಯಿಸಿ, ತಾಯಿ ನಡವಳಿಕೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಕೋಪಿಸಿಕೊಂಡು ವ್ಯವಸ್ಥಿತ ಸಂಚು ರೂಪಿಸಿ ಯುವಕನ ತಲೆಗೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿರುವ ಇಬ್ಬರು ಆರೋಪಿಗಳನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆಯ ಟಿಪ್ಪು ನಗರದ ನಿವಾಸಿ ಅರ್ಬಾಜ್ನನ್ನು(26) ಕೊಲೆ ಮಾಡಿದ ಆರೋಪದಡಿ ಮೃತನ ಸ್ನೇಹಿತರಾದ ಸೈಯದ್ ಇಲಿಯಾಸ್ ಹಾಗೂ ಜಹೀರ್ ಅಲಿಯಾಸ್ ಕಾಲು ಎಂಬುವರನ್ನು ಬಂಧಿಸಲಾಗಿದೆ.
"ಆರೋಪಿಗಳು ಹಾಗೂ ಮೃತ ಅರ್ಬಾಜ್ ಒಂದೇ ಏರಿಯಾದ ನಿವಾಸಿಗಳಾಗಿದ್ದರು. ಎಲ್ಲರೂ ರೇಷ್ಮೆ ನೇಯುವ ಕೆಲಸ ಮಾಡಿಕೊಂಡಿದ್ದರು. ಈ ಮಧ್ಯೆ ಜಹೀರ್ನ ತಂಗಿಯನ್ನು ಅಬಾರ್ಜ್ ಚುಡಾಯಿಸುತ್ತಿದ್ದ. ಶಾಲೆ ಬಳಿ ಹೋಗಿ ರೇಗಿಸುತ್ತಿದ್ದ. ಅಲ್ಲದೆ ತಾಯಿಯ ನಡವಳಿಕೆ ಬಗ್ಗೆ ಹಗುರವಾಗಿ ಮಾತನಾಡಿದ್ದ. ತಂಗಿಗೆ ಚುಡಾಯಿಸುತ್ತಿರುವ ಹಾಗೂ ತಮ್ಮ ಬಗ್ಗೆ ಇಲ್ಲಸಲ್ಲದ ಬಗ್ಗೆ ಅಗೌರವವಾಗಿ ಮಾತನಾಡುತ್ತಿರುವ ಬಗ್ಗೆ ಜಹೀರ್ ಬಳಿ ತಾಯಿ ಹೇಳಿಕೊಂಡಿದ್ದ." ಎಂದು ರೈಲ್ವೇ ಪೊಲೀಸರು ತಿಳಿಸಿದರು.
"ಇದರಿಂದ ಅಸಮಾಧಾನಗೊಂಡ ಜಹೀರ್, ಸೈಯದ್ ಇಲಿಯಾಸ್ ಜೊತೆ ನಡೆದಿರುವ ವಿಷಯ ತಿಳಿಸಿ ಹತ್ಯೆಗೆ ಸಂಚು ರೂಪಿಸಿದ್ದ. ಜನವರಿ 20ರಂದು ಅರ್ಬಾಜ್ಗೆ ಕರೆ ಮಾಡಿ ಮದ್ಯ ಕುಡಿಯಲು ಆಹ್ವಾನಿಸಿದ್ದ. ಮೂವರು ಒಟ್ಟಾಗಿ ಮದ್ಯಪಾನ ಮಾಡಿದ್ದಾರೆ. ಅರ್ಬಾಜ್ನನ್ನ ಪುಸಲಾಯಿಸಿ ರಾಮನಗರ ರೈಲು ನಿಲ್ದಾಣ ಬಳಿ ಕರೆದೊಯ್ದು ಹಾಕಿ ಸ್ಟಿಕ್ನಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಅಲ್ಲೇ ಇದ್ದ ಸಿಮೆಂಟ್ ಕಾಂಕ್ರೀಟ್ ಕಲ್ಲನ್ನು ಅರ್ಬಾಜ್ ತಲೆ ಮೇಲೆ ಎತ್ತಿಹಾಕಿ ಹತ್ಯೆ ಮಾಡಿದ್ದಾರೆ. ಮನೆಗೆ ಹೋಗಿ ಬಟ್ಟೆ ಬದಲಾಯಿಸಿದ್ದಾರೆ. ನಂತರ ಶವದ ಗುರುತು ಸಿಗದಿರಲಿ ಎಂದು ಪೆಟ್ರೋಲ್ ಬಂಕ್ಗೆ ಹೋಗಿ ಪೆಟ್ರೋಲ್ ತಂದು ಸುರಿದು ಸುಟ್ಟು ಹಾಕುವ ಪ್ಲ್ಯಾನ್ ವಿಫಲವಾಗಿದೆ" ಎಂದು ರೈಲ್ವೇ ಪೊಲೀಸರು ವಿವರಿಸಿದರು.
ಮೃತನ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ನಂಬರ್ನಿಂದ ಆರೋಪಿಗಳ ಪತ್ತೆ: "ಜನವರಿ 20ರ ರಾತ್ರಿ ಹತ್ಯೆ ಮಾಡಿ ಆರೋಪಿಗಳು ರಕ್ತಸಿಕ್ತವಾಗಿದ್ದ ಬಟ್ಟೆ ಸುಟ್ಟು ಹಾಕಿ, ಏನು ಆಗಿಲ್ಲವೆಂಬಂತೆ ಮನೆಯಲ್ಲೇ ಇದ್ದರು. 21ರ ಬೆಳಗ್ಗೆ ಅಪರಿಚಿತ ಶವ ಪತ್ತೆಯಾಗಿರುವ ಬಗ್ಗೆ ರೈಲ್ವೇ ಪೊಲೀಸರಿಗೆ ಮಾಹಿತಿ ಬಂದಿತ್ತು. ಮುಖ ಚಹರೆ ಗೊತ್ತಾಗದಂತಹ ಪರಿಸ್ಥಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿರುವ ಬಗ್ಗೆ ಸುಳಿವು ಲಭ್ಯವಾಗಿತ್ತು. ಅಲ್ಲದೆ ಮೃತನ ಪ್ಯಾಂಟ್ ಜೇಬಿನಲ್ಲಿದ್ದ ಚೀಟಿಯಲ್ಲಿ ಮೊಬೈಲ್ ನಂಬರ್ ದೊರೆಕಿತ್ತು. ಇದೇ ಆಧಾರದ ಮೇರೆಗೆ ತನಿಖೆ ನಡೆಸಿದಾಗ ರಾಮನಗರದ ಟಿಪ್ಪುನಗರದ ನಿವಾಸಿ ಅರ್ಬಾಜ್ ಎಂಬಾತನ ಮೃತದೇಹವೆಂಬ ಗುರುತು ಪತ್ತೆಯಾಗಿತ್ತು. ಕುಟುಂಬಸ್ಥರನ್ನು ಪ್ರಶ್ನಿಸಿದಾಗ ಆರೋಪಿಗಳ ಹೆಸರು ಹೇಳಿದ್ದರು. ಸಿಡಿಆರ್ ಸೇರಿದಂತೆ ತಾಂತ್ರಿಕ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ರೈಲ್ವೇ ಎಸ್ಪಿ ಡಾ. ಕೆ.ಎಸ್.ಸೌಮ್ಯಲತಾ ತಿಳಿಸಿದ್ದಾರೆ.
ಇದನ್ನೂ ಓದಿ:ರೌಡಿಶೀಟರ್ನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು: ಹಳೆ ದ್ವೇಷ ಶಂಕೆ